ಬೆಂಗಳೂರು-ಮೈಸೂರು ನಡುವೆ ಎರಡು ಮೆಮು ರೈಲಿಗೆ ಪ್ರಸ್ತಾವನೆ

Update: 2019-06-20 14:40 GMT

ಬೆಂಗಳೂರು, ಜೂ.20: ಬೆಂಗಳೂರು-ಮೈಸೂರು ನಡುವೆ ಸಂಚರಿಸುತ್ತಿರುವ ಹಾಲಿ ಎರಡು ಪ್ಯಾಸೆಂಜರ್ ರೈಲುಗಳನ್ನು ಮೇಲ್ದರ್ಜೆಗೇರಿಸಿ ‘ಮೆಮು’ ರೈಲುಗಳನ್ನಾಗಿ ಪರಿವರ್ತಿಸುವಂತೆ ನೈರುತ್ಯ ರೈಲ್ವೆ ಬೆಂಗಳೂರು ವಲಯ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿದೆ.

ಹಾಲಿ ಸಂಚಾರ ಮಾಡುತ್ತಿರುವ ಪ್ಯಾಸೆಂಜರ್ ರೈಲುಗಳು ಬೆಳಗ್ಗೆ ಹಾಗೂ ರಾತ್ರಿ ಸಮಯದಲ್ಲಿ ಮೈಸೂರು-ಬೆಂಗಳೂರು ನಡುವೆ ಸಂಚಾರ ಮಾಡುತ್ತವೆ. ರೈಲು ಸಂಖ್ಯೆ 56237/38 ಮಧ್ಯಾಹ್ನ 3 ಗಂಟೆಗೆ ಮೈಸೂರು ಬಿಟ್ಟು, ಸಂಜೆ 6.15ಕ್ಕೆ ಬೆಂಗಳೂರು ನಗರ ತಲುಪುತ್ತದೆ. ಮತ್ತೆ ರಾತ್ರಿ 7 ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 10.20ಕ್ಕೆ ಮೈಸೂರು ತಲುಪಲಿದೆ.

ಅದರಂತೆಯೇ ರೈಲು ಸಂಖ್ಯೆ 56231/32 ಮೈಸೂರಿನಿಂದ ಬೆಳಗ್ಗೆ 6.10ಕ್ಕೆ ಹೊರಟು 9.15ಕ್ಕೆ ಬೆಂಗಳೂರು ತಲುಪುತ್ತದೆ. ನಂತರ ಬೆಳಗ್ಗೆ 9.20 ಕ್ಕೆ ಹೊರಟು ಮಧ್ಯಾಹ್ನ 12.45ಕ್ಕೆ ಮೈಸೂರು ತಲುಪಲಿದೆ. ಈ ಎರಡೂ ರೈಲುಗಳು ಡಿಸೇಲ್ ಎಂಜಿನ್ ಕಳೆದುಕೊಂಡಿದ್ದು, ವಿದ್ಯುತ್ ಚಾಲಿತ ರೈಲುಗಳಾಗಿ ಪರಿವರ್ತನೆಯಾಗಲಿವೆ.

ಪ್ರತಿದಿನ ಸಂಚಾರ ಮಾಡುವ ಈ ಎರಡೂ ಪ್ಯಾಸೆಂಜರ್ ರೈಲುಗಳನ್ನು ಮೆಮು ರೈಲುಗಳಾಗಿ ಮಾರ್ಪಡಿಸಿದರೆ ಸಂಚಾರ ಸಮಯ ಬದಲಾಗುತ್ತದೆ. ಆಗ ಬೆ.5.50 ಕ್ಕೆ ಮೈಸೂರಿನಿಂದ ಹೊರಟು ಬೆ.9 ಕ್ಕೆ ಬೆಂಗಳೂರು ತಲುಪುತ್ತದೆ. ಮತ್ತೆ ಬೆ.9.10 ಕ್ಕೆ ಬೆಂಗಳೂರು ಬಿಟ್ಟು, ಮಧ್ಯಾಹ್ನ 12.30 ಕ್ಕೆ ಮೈಸೂರು ತಲುಪುತ್ತದೆ. ಮತ್ತೊಂದು ರೈಲು ಮಧ್ಯಾಹ್ನ 1.45 ಮೈಸೂರಿನಲ್ಲಿ ಹೊರಟು, ಸಂಜೆ 5 ಕ್ಕೆ ಬೆಂಗಳೂರು ತಲುಪುತ್ತದೆ. ಸಂಜೆ 7 ಕ್ಕೆ ಬಿಟ್ಟು, ರಾತ್ರಿ 11ಕ್ಕೆ ಮೈಸೂರಿಗೆ ತಲುಪಲಿದೆ.

ದರ ಬದಲಾವಣೆಯಿಲ್ಲ: ರೈಲುಗಳನ್ನು ಮೇಲ್ದರ್ಜೆಗೇರಿಸಿದ ನಂತರ ಟಿಕೆಟ್ ದರ ಏರಿಕೆ ಮಾಡುವುದಿಲ್ಲ. ಬೆಂಗಳೂರು-ಮೈಸೂರು ನಡುವೆ ಪ್ಯಾಸೆಂಜರ್ ರೈಲಿನಲ್ಲಿ 30 ದರವಿದೆ. ಅದೇ ದರ ಮೆಮು ರೈಲಿಗೂ ಅನ್ವಯವಾಗಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News