ಪ್ರಜ್ವಲ್ ಪ್ರಮಾಣ ವಚನ ಸ್ವೀಕಾರಕ್ಕೆ ತಡೆ ಕೋರಿ ಲೋಕಸಭಾ ಸ್ಪೀಕರ್‌ಗೆ ಪತ್ರ: ಎ.ಮಂಜು

Update: 2019-06-20 16:03 GMT
ಎ.ಮಂಜು- ಪ್ರಜ್ವಲ್ ರೇವಣ್ಣ

ಬೆಂಗಳೂರು, ಜೂ.20: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿರುವ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪ್ರಮಾಣ ವಚನ ಸ್ವೀಕರಿಸದಂತೆ ತಡೆ ನೀಡುವಂತೆ ಕೋರಿ ಸ್ಪೀಕರ್ ಓಂ ಬಿರ್ಲಾರಿಗೆ ಪತ್ರ ಬರೆಯುವುದಾಗಿ ಪರಾಜಿತ ಬಿಜೆಪಿ ಅಭ್ಯರ್ಥಿ ಎ.ಮಂಜು ತಿಳಿಸಿದರು.

ಗುರುವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಕೋಟ್ಯಂತರ ರೂ.ಆಸ್ತಿಯ ಒಡೆಯನಾದದ್ದು ಹೇಗೆ ಎಂದು ಪ್ರಶ್ನಿಸಿದರು.

ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಪ್ರಜ್ವಲ್ ರೇವಣ್ಣ ತನ್ನ ತಂದೆ, ತಾಯಿ ಸೇರಿದಂತೆ 15 ಮಂದಿಯಿಂದ 1.04 ಕೋಟಿ ರೂ.ಸಾಲ ಪಡೆದಿರುವುದಾಗಿ ತೋರಿಸಿದ್ದಾರೆ. ಆದರೆ, ವಾಸ್ತವವಾಗಿ 3.72 ಕೋಟಿ ರೂ.ಗಳನ್ನು ಅವರು ಪಡೆದಿದ್ದಾರೆ. ಉಳಿದ 2.68 ಕೋಟಿ ರೂ.ಗಳ ವಿವರವನ್ನು ಆದಾಯ ತೆರಿಗೆಯಲ್ಲಿ ತೋರಿಸಿಲ್ಲ ಎಂದು ಅವರು ದೂರಿದರು.

ಚುನಾವಣಾ ನಿಯಮದಂತೆ ಐದು ವರ್ಷಗಳ ಕಡ್ಡಾಯ ಆದಾಯ ತೆರಿಗೆ ಘೋಷಣೆ ಮಾಡಿಕೊಳ್ಳಬೇಕು. ಆದರೆ, 2008 ರಿಂದ ಆದಾಯವಿದ್ದರೂ 2017-18ನೆ ಸಾಲಿನಲ್ಲಿ ಮಾತ್ರ ಪ್ರಜ್ವಲ್ ರೇವಣ್ಣ, ಆದಾಯ ತೆರಿಗೆ ಘೋಷಣೆ ಮಾಡಿಕೊಂಡಿದ್ದಾರೆ. ಆ ವರ್ಷದ ಆದಾಯ ಕೇವಲ 16,59,720 ರೂ.ಗಳು. ಆದರೆ, ಅವರ ಖಾತೆಗೆ ಸುಮಾರು 10 ಕೋಟಿ ರೂ.ಗಳಿಗೂ ಹೆಚ್ಚಿನ ಹಣ ಹರಿದು ಬಂದಿದೆ ಎಂದು ಮಂಜು ಆರೋಪಿಸಿದರು.

ಪಿಯುಸಿ ವಿದ್ಯಾಭ್ಯಾಸ ಮಾಡುವ ಸಮಯದಲ್ಲಿ ಸುಮಾರು 3.10 ಕೋಟಿ ರೂ.ಗಳ ಆಸ್ತಿಯನ್ನು ಅವರೇ ಖರೀದಿಸುತ್ತಾರೆಂದರೆ, ಈತನ ತಂದೆಯ ಅಧಿಕಾರ ದುರುಪಯೋಗ ಮಾಡಿಕೊಂಡು ಈ ಆಸ್ತಿ ಗಳಿಸಿರುತ್ತಾನೆ. ಈತನಿಗೆ ಬಂದಿರುವ ಹಣ ಸಂಪೂರ್ಣ ಭ್ರಷ್ಟಾಚಾರದಿಂದ ಬಂದಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದಲೇ ಕೇವಲ ಒಂದು ವರ್ಷದ ಆದಾಯ ಘೋಷಣೆ ಮಾಡಿಕೊಳ್ಳಲಾಗಿದೆ ಎಂದು ಅವರು ದೂರಿದರು.

ಸುಮಾರು 10 ವರ್ಷಗಳಿಂದ ಕೋಟ್ಯಂತರ ರೂ.ಭ್ರಷ್ಟಾಚಾರದಿಂದ ಹಾಗೂ ಬೇನಾಮಿಯಿಂದ ಹಣ ಇವರ ಖಾತೆಗೆ ಬಂದರೂ ಆ ಹಣದ ಬಗ್ಗೆ ಮತ್ತು ಆದಾಯದ ಬಗ್ಗೆ ಆದಾಯ ತೆರಿಗೆ ಇಲಾಖೆಯವರು ಇದುವರೆಗೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಅಂದರೆ, ಇದರ ಹಿಂದೆ ಆದಾಯ ತೆರಿಗೆ ಇಲಾಖೆಯವರ ಪರೋಕ್ಷ ಬೆಂಬಲವಿದೆಯೋ? ಅಥವಾ ದೇವೇಗೌಡ ಹಾಗೂ ರೇವಣ್ಣ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲವೇ? ಎಂದು ಮಂಜು ಪ್ರಶ್ನಿಸಿದರು.

ಆದಾಯ ತೆರಿಗೆ ಇಲಾಖೆಯ ಆಯುಕ್ತರು ಯಾವ ಉದ್ದೇಶದಿಂದ ಈ ತನಿಖೆಯನ್ನು ಕೈಬಿಟ್ಟಿದ್ದಾರೆ. ಅವರಿಂದ ತನಿಖೆ ಸಾಧ್ಯವಿಲ್ಲದಿದ್ದರೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದ ಮಂಜು, ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ನಾಗರಾಜ ಎಂಬ ನಿವೃತ್ತ ನೌಕರನ ಬೇನಾಮಿ ಹೆಸರಿನಲ್ಲಿ ಸುಮಾರು 80 ಕೋಟಿ ರೂ.ಆಸ್ತಿಯನ್ನು ಖರೀದಿಸಿರುವ ರೇವಣ್ಣ, ಅದಕ್ಕೆ ಹಣ ಹೂಡಿಕೆ ಮಾಡಿ, ಭೂ ಪರಿವರ್ತನೆಗಾಗಿ ಕಡತವನ್ನು ಸರಕಾರಕ್ಕೆ ಮಂಡಿಸಿದ್ದಾರೆ. ಇದರ ಒಟ್ಟು ಮೊತ್ತ ಸುಮಾರು 120 ಕೋಟಿ ರೂ.ಎಂದರು.

ಈ ವಿಚಾರವಾಗಿ ಆದಾಯ ತೆರಿಗೆ ಇಲಾಖೆಯವರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಹಾಗೂ ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾಗಿ ಇವರ ಅಕ್ರಮದ ಕುರಿತು ಚರ್ಚಿಸಲು ಸಮಯ ಕೋರಿದ್ದೇನೆ ಎಂದು ಮಂಜು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News