ತರಗತಿಗಳು ಆರಂಭವಾಗಿ ತಿಂಗಳು ಕಳೆಯುತ್ತಿದ್ದರೂ ಪಠ್ಯಪುಸ್ತಕಗಳಿಲ್ಲ: ಪರದಾಡುತ್ತಿದ್ದಾರೆ ವಿದ್ಯಾರ್ಥಿಗಳು !

Update: 2019-06-20 16:22 GMT

ಬೆಂಗಳೂರು, ಜೂ.20: ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಿ ತಿಂಗಳು ಕಳೆಯುತ್ತಿದ್ದರೂ ಪಠ್ಯಪುಸ್ತಕಗಳಿಲ್ಲದೆ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಾರುಕಟ್ಟೆಗಳಲ್ಲಿ ಪಠ್ಯಪುಸ್ತಕದ ಅಲಭ್ಯತೆಯಿಂದ ವಿದ್ಯಾರ್ಥಿಗಳು ಪಠ್ಯಪುಸ್ತಕವಿಲ್ಲದೇ ಕಾಲೇಜಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಕಷ್ಟು ಕಾಲೇಜುಗಳು ಕಳೆದ ವರ್ಷದ ಪಠ್ಯಪುಸ್ತಕವನ್ನೆ ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿವೆ. ಪ್ರಥಮ ಪಿಯು ವಿದ್ಯಾರ್ಥಿಗಳು ದ್ವಿತೀಯ ಪಿಯು ವಿದ್ಯಾರ್ಥಿಗಳು ಬಳಕೆ ಮಾಡಿದ ಪಠ್ಯ ಕ್ರಮವನ್ನು ಪಡೆದು ವ್ಯಾಸಂಗ ಮಾಡಲು ಮುಂದಾಗಿದ್ದಾರೆ.

ಪಠ್ಯಪುಸ್ತಕವನ್ನು ಖಾಸಗಿ ಕಂಪನಿಗಳಿಗೆ ಟೆಂಡರ್ ನೀಡಲಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ನಕಲು ಪ್ರತಿಯನ್ನು ತಯಾರಿಸಿ ಮುದ್ರಣಕ್ಕೆ ನೀಡಬೇಕಿತ್ತು. ಎಲ್ಲ ಪ್ರಕ್ರಿಯೆಯೂ ಮೇನಲ್ಲಿ ಮುಕ್ತಾಯವಾದರೆ ಜೂನ್ ವೇಳೆಗೆ ಮಾರುಕಟ್ಟೆಯಲ್ಲಿ ಪಠ್ಯಪುಸ್ತಕಗಳು ಸಿಗುತ್ತಿದ್ದವು. ಆದರೆ, ಸರಿಯಾದ ಸಮಯಕ್ಕೆ ಪಠ್ಯಪುಸ್ತಕಗಳ ಮುದ್ರಣ ಆರಂಭವಾಗದ ಹಿನ್ನೆಲೆಯಲ್ಲಿ ಪುಸ್ತಕಗಳು ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ ಎಂಬ ಅಭಿಪ್ರಾಯ ಕೇಳಿಬಂದಿದೆ.

ಪುಸ್ತಕ ಲಭ್ಯವಿಲ್ಲ: ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಖರೀದಿಗಾಗಿ ಎಲ್ಲೆಡೆ ಅಂಗಡಿಗಳಿಗೆ ಮುಗಿ ಬೀಳುತ್ತಿದ್ದಾರೆ. ಆದರೆ, ಪಠ್ಯ ಪುಸ್ತಕ ಸಿಗುತ್ತಿಲ್ಲ. ಅಲ್ಲದೆ, ಕೆಲವು ಕಡೆಗಳಲ್ಲಿ ಪಠ್ಯಪುಸ್ತಕಗಳಿಲ್ಲ ಎಂಬ ಫಲಕವನ್ನೂ ಹಾಕಿದ್ದಾರೆ. ಶಿಕ್ಷಣ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು ಶೀಘ್ರವಾಗಿ ಪುಸ್ತಕಗಳನ್ನು ರವಾನಿಸುವಂತೆ ಒತ್ತಾಯಿಸುತ್ತಿದ್ದಾರೆ.

ಟೆಂಡರ್ ವಿಳಂಬ: ಪದವಿ ಪೂರ್ವ ಶಿಕ್ಷಣ ಇಲಾಖೆಯು ಎಪ್ರಿಲ್ ಅಂತ್ಯದಲ್ಲಿ ಪಠ್ಯಪುಸ್ತಕ ಮುದ್ರಣಕ್ಕೆ ಟೆಂಡರ್ ಕರೆದಿದೆ. ಮೇ 14ರ ನಂತರ ಕಾರ್ಯಾದೇಶವನ್ನು ನೀಡಿದೆ. ಹೀಗಾಗಿ ಪಠ್ಯಪುಸ್ತಕ ಮುದ್ರಣ ಪ್ರಕ್ರಿಯೆ ವಿಳಂಬವಾಗಿದೆ. ಅಲ್ಲದೆ, ಲೋಕಸಭಾ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿದ್ದ ಪರಿಣಾಮ ಟೆಂಡರ್ ಕರೆದು ಕಾರ್ಯಾದೇಶ ನೀಡುವುದು ವಿಳಂಬವಾಗಿದೆ. ಮುಂದಿನ 10 ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು ಲಭ್ಯವಾಗಲಿವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಪಿ.ಸಿ.ಜಾಫರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News