ವರ್ಷವಾದರೂ ಅನ್ವರ್ ಹತ್ಯೆ ಆರೋಪಿಗಳ ಸುಳಿವಿಲ್ಲ: ತನಿಖೆಗೆ ಪೊಲೀಸ್ ಇಲಾಖೆ ನಿರ್ಲಕ್ಷ್ಯ- ಸಹೋದರ ಆರೋಪ

Update: 2019-06-20 16:38 GMT

ಚಿಕ್ಕಮಗಳೂರು, ಜೂ.20: ನಗರದ ಗೌರಿಕಾಲುವೆ ಬಡಾವಣೆಯಲ್ಲಿ ಕಳೆದ ವರ್ಷ ಜೂ.22ರಂದು ಹತ್ಯೆಗೀಡಾದ ತನ್ನ ಸಹೋದರನ ಕೊಲೆ ರಹಸ್ಯ ಬೇಧಿಸುವಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ಬಿಜೆಪಿ ಪಕ್ಷದವರೂ ಈ ಪ್ರಕರಣವನ್ನು ನಿರ್ಲಕ್ಷ್ಯಿಸಿದ್ದಾರೆ. ಪೊಲೀಸರು ಕಾಣದ ಕೈಗಳ ಒತ್ತಡಕ್ಕೆ ಮಣಿದು ಹತ್ಯೆ ಆರೋಪಿಗಳ ತನಿಖೆಯನ್ನು ನಿರ್ಲಕ್ಷ್ಯಿಸಿದ್ದಂತಿದ್ದು, ಶೀಘ್ರ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಜೂ.22ರಂದು ನಗರದಲ್ಲಿ ಕುಟುಂಬಸ್ಥರಿಂದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ಇದಕ್ಕೂ ಪೊಲೀಸರು ಸ್ಪಂದಿಸದಿದ್ದಲ್ಲಿ ದಯಾಮರಣಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ಹತ್ಯೆಗೊಳಗಾದ ಬಿಜೆಪಿ ಮುಖಂಡ ಅನ್ವರ್ ಅವರ ಸಹೋದರ ಅಬ್ದುಲ್ ಕಬೀರ್ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡು ಬಿಜೆಪಿ ನಗರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದ ಅನ್ವರ್ ಹತ್ಯೆಯಾಗಿ ಜೂ.22ಕ್ಕೆ ಒಂದು ವರ್ಷವಾಗುತ್ತಿದೆ. ಆದರೆ ಪೊಲೀಸರು ಅನ್ವರ್ ಅವರನ್ನು ಹತ್ಯೆ ಮಾಡಿದ ಆರೋಪಿಗಳ ಬಗ್ಗೆ ಸಣ್ಣ ಸುಳಿವನ್ನೂ ಪತ್ತೆ ಹಚ್ಚಿಲ್ಲ. ತನಿಖೆ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿಗಳನ್ನು ವಿಚಾರಿಸಿದರೆ, ತನಿಖೆ ಪ್ರಗತಿಯಲ್ಲಿದೆ ಎಂದಷ್ಟೇ ಸಮಜಾಯಿಸಿ ನೀಡುತ್ತಿದ್ದಾರೆ. ಆದರೆ ಕೊಲೆ ನಡೆದು ವರ್ಷವಾದರೂ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ವಿಫಲರಾಗಿದ್ದಾರೆ. ಪೊಲೀಸರ ಕಾರ್ಯವೈಖರಿಯನ್ನು ಗಮನಿಸಿದರೆ ಇಲಾಖೆಯ ಮೇಲೆ ರಾಜಕಾರಣಿಗಳ ಇಲ್ಲವೆ ಸರಕಾರದ ಒತ್ತಡವಿದ್ದಂತಿದೆ ಎಂದು ಕಬೀರ್ ಅನುಮಾನ ವ್ಯಕ್ತಪಡಿಸಿದರು.

ಕುಟುಂಬಕ್ಕೆ ಆಧಾರವಾಗಿದ್ದ ಅನ್ವರ್ ಅವರನ್ನು ಕಳೆದುಕೊಂಡ ಕುಟುಂಬ ಪ್ರತಿದಿನ ಕಣ್ಣೀರಿಡುತ್ತಾ ದಿನಕಳೆಯುತ್ತಿದೆ. ಹತ್ಯೆ ನಡೆದಿರುವುದಾದರೂ ಯಾಕೆಂದು ತಿಳಿದು ಬರುತ್ತಿಲ್ಲ. ಹತ್ಯೆ ಆರೋಪಿಗಳ ಬಗ್ಗೆ ತನ್ನ ಕುಟುಂಬದವರು ಕೆಲ ವ್ಯಕ್ತಿಗಳ ಮೇಲೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಪೊಲೀಸರು ಈ ನಿಟ್ಟಿನಲ್ಲೂ ಸೂಕ್ತ ತನಿಖೆ ಕೈಗೊಂಡಿಲ್ಲ ಎಂದು ದೂರಿದ ಅವರು, ತನ್ನ ಸಹೋದರನ ಹತ್ಯೆ ನಡೆದು 200 ದಿನ ಕಳೆದ ಸಂದರ್ಭದಲ್ಲಿ ನ್ಯಾಯ ದೊರಕಿಸಿ ಕೊಡಬೇಕೆಂದು ಒತ್ತಾಯಿಸಿ ಕೇಂದ್ರದ ಗೃಹಸಚಿವರಿಗೆ ಹಾಗೂ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ಈ ಮನವಿಗಳಿಗೆ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಅನ್ವರ್ ಅವರು ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡು ಪಕ್ಷದ ಏಳಿಗೆಗೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಆದರೆ ಆರಂಭದಲ್ಲಿ ಶಾಸಕ ಸಿ.ಟಿ.ರವಿ ಮತ್ತು ಬಿಜೆಪಿ ಮುಖಂಡರು ಹತ್ಯೆ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ನಾವು ನಡೆಸಿದ ಪ್ರತಿಭಟನೆಗೆ ಬೆಂಬಲ ನೀಡಿದ್ದರು. ಆದರೆ ಶಾಸಕರಾದಿಯಾಗಿ ಬಿಜೆಪಿ ಮುಖಂಡರೂ ಈ ಪ್ರಕರಣದ ತನಿಖೆ ಸಂಬಂಧ ಸದ್ಯ ಯಾವುದೇ ಸೊಲ್ಲೆತ್ತುತ್ತಿಲ್ಲ. ಈ ಬೆಳವಣಿಗೆಗಳಿಂದ ಬೇಸತ್ತಿರುವ ತನ್ನ ಕುಟುಂಬದವರು ಹಾಗೂ ಅನ್ವರ್ ಸ್ನೇಹಿತರ ಬೆಂಬಲದೊಂದಿಗೆ ಜೂ.22 ರಂದು ನಗರದ ಗಾಂಧಿ ಪ್ರತಿಮೆ ಎದುರು ಬೆಳಗ್ಗೆ 10ರಿಂದ ಸಂಜೆ 6ವರೆಗೆ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡು ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಅನ್ವರ್ ಕುಟುಂಬಸ್ಥರು, ಸ್ನೇಹಿತರಾದ ಮುಹಮ್ಮದ್ ಅಬ್ದುಲ್, ಲತೀಫ್, ಸಿರಾಝ್, ದಾವೂದ್, ಗೌಸ್ ಮುನೀರ್, ಆಲಿ, ಮುನೀರ್, ರಘು ಉಪಸ್ಥಿತರಿದ್ದರು.

ಅನ್ವರ್ ಹತ್ಯೆ ನಡೆದಾಗ ಜಿಲ್ಲಾ ಎಸ್ಪಿಯಾಗಿ ಅಣ್ಣಾಮಲೈ ಅವರು ಕಾರ್ಯನಿರ್ವಹಿಸುತ್ತಿದ್ದು, ಹಂತಕರ ಬಂಧನಕ್ಕೆ ಒತ್ತಾಯಿಸಿ ನಡೆದ ಪ್ರತಿಭಟನೆ ಸಂದರ್ಭ ಎಸ್ಪಿ ಎಣ್ಣಾಮಲೈ 40 ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ್ದರು. ಆದರೆ ಪ್ರಕರಣದ ತನಿಖೆ ನಡೆಸುತ್ತಿದ್ದ ಅವರನ್ನು ಸರಕಾರ ನಾಲ್ಕೇ ತಿಂಗಳಿಗೆ ವರ್ಗಾವಣೆ ಮಾಡಿತ್ತು. ನಂತರ ಪ್ರಕರಣ ಸಂಬಂಧ ಕಾರ್ಯ ನಿರ್ವಹಿಸುತ್ತಿದ್ದ ನಾಲ್ಕು ತನಿಖಾಧಿಕಾರಿಗಳನ್ನೂ ಬದಲಾಯಿಸಲಾಗಿದೆ. ಈ ಬೆಳವಣಿಗೆಗಳನ್ನು ಗಮನಿಸಿದರೆ ಸರಕಾರದ ಒತ್ತಡದಿಂದ ಪೊಲೀಸರು ಪ್ರಕರಣದ ತನಿಖೆಗೆ ನಿರ್ಲಕ್ಷ್ಯ ವಹಿಸಿದ್ದಾರೆಂಬ ಶಂಕೆ ಮೂಡುತ್ತಿದೆ.
- ಅಬ್ದುಲ್ ಕಬೀರ್, ಹತ್ಯೆಗೊಳಗಾದ ಅನ್ವರ್ ಸಹೋದರ

ಅನ್ವರ್ ಅವರು ಬಿಜೆಪಿ ಪಕ್ಷದಲ್ಲಿದ್ದರೂ ಸ್ನೇಹ ಜೀವಿಯಾಗಿದ್ದರು. ಅವರು ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರಿಂದ ಆರಂಭದಲ್ಲಿ ಬಿಜೆಪಿ ಮುಖಂಡರು ತನಿಖೆಗೆ ಒತ್ತಾಯಿಸಿ ಪ್ರತಿಭಟನೆ ಮಾಡಿದ್ದರು. ಆದರೆ ಸದ್ಯ ಬಿಜೆಪಿ ಮುಖಂಡರೂ ಪ್ರಕರಣದ ಬಗ್ಗೆ ಮಾತೇ ಆಡುತ್ತಿಲ್ಲ. ಅಲ್ಪಸಂಖ್ಯಾತರೆಂಬ ಕಾರಣಕ್ಕೆ ಬಿಜೆಪಿ ಮುಖಂಡರು ಪ್ರಕರಣವನ್ನು ನಿರ್ಲಕ್ಷಿಸಿದ್ದಾರೆ. ಗೌರಿ ಲಂಕೇಶ್, ದಾಬೋಲ್ಕರ್ ರಂತಹ ಹೋರಾಟಗಾರರ ಹತ್ಯೆ ಆರೋಪಿಗಳನ್ನು ಕೊಂದವರನ್ನೂ ಪತ್ತೆ ಹಚ್ಚಿರುವ ರಾಜ್ಯದ ಪೊಲೀಸರಿಗೆ ಚಿಕ್ಕಮಗಳೂರಿಣಮತಹ ಸಣ್ಣ ನಗರದಲ್ಲಿ ನಡೆದ ಹತ್ಯೆಯನ್ನು ಬೇದಿಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಪೊಲೀಸರು ನೊಂದ ಕುಟುಂಬಕ್ಕೆ ನ್ಯಾಯ ಒದಗಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು.
- ಗೌಸ್ ಮುನೀರ್, ಅನ್ವರ್ ಸ್ನೇಹಿತ ಹಾಗೂ ಕೋಮು ಸೌಹಾರ್ದ ವೇದಿಕೆ ಸಂಚಾಲಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News