ಡಿಕೆಶಿ ತಾಯಿಗೆ ನೀಡಿದ್ದ ಶೋಕಾಸ್ ನೋಟಿಸ್‌ಗೆ ಹೈಕೋರ್ಟ್ ತಡೆ

Update: 2019-06-20 17:08 GMT

ಬೆಂಗಳೂರು, ಜೂ.20: ಸಚಿವ ಡಿ.ಕೆ.ಶಿವಕುಮಾರ್ ತಾಯಿ ಗೌರಮ್ಮ ಒಡೆತನದ ಆಸ್ತಿ ಮುಟ್ಟುಗೋಲಿಗೆ ನೀಡಲಾಗಿದ್ದ ಶೋಕಾಸ್ ನೋಟಿಸ್‌ಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಗೌರಮ್ಮ ಅವರ ಒಡೆತನದ ಆಸ್ತಿ ಮುಟ್ಟುಗೋಲಿಗೆ ಐಟಿ ಇಲಾಖೆಯ ಬೇನಾಮಿ ಸೆಲ್ ಶೋಕಾಸ್ ನೋಟಿಸ್ ನೀಡಿತ್ತು. ಅಲ್ಲದೆ, 90 ದಿನಗಳಲ್ಲಿ ವಿವರಣೆ ನೀಡುವಂತೆ ಮಾ.22ರಂದು ಐಟಿ ಇಲಾಖೆ ಸೂಚಿಸಿತ್ತು. ಈ ಹಿನ್ನೆಲೆ ಶೋಕಾಸ್ ನೋಟಿಸ್ ರದ್ದು ಕೋರಿ ಗೌರಮ್ಮ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಗುರುವಾರ ಹೈಕೋರ್ಟ್ ನ್ಯಾಯಪೀಠದಲ್ಲಿ ವಿಚಾರಣೆ ನಡೆಯಿತು.

ಅರ್ಜಿದಾರರ ಪರ ವಾದಿಸಿದ ವಕೀಲರು, ಗೌರಮ್ಮ ಹಾಗೂ ಅವರ ಕುಟುಂಬ ಸಾಕಷ್ಟು ಜಮೀನು ಹೊಂದಿದ್ದಾರೆ. ಕೃಷಿಯಿಂದ ಹಣವನ್ನು ಸಂಪಾದನೆ ಮಾಡಿದ್ದಾರೆ. 2016ರಲ್ಲಿ ಬೇನಾಮಿ ಆಸ್ತಿ ಕಾಯ್ದೆ ಜಾರಿಗೆ ತಿದ್ದುಪಡಿ ಮಾಡಲಾಗಿದೆ. ಹೀಗಾಗಿ, ಗೌರಮ್ಮ ವಿರುದ್ದ ತಿದ್ದುಪಡಿಯಾಗಿರುವ ಕಾಯ್ದೆ ಅನ್ವಯವಾಗುವುದಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಐಟಿ ಇಲಾಖೆಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿತು.

ಸಚಿವ ಡಿ.ಕೆ.ಶಿವಕುಮಾರ್ ಅವರು ತನ್ನ ತಾಯಿ ಹೆಸರಿನಲ್ಲಿ ಜಮೀನು ಸೇರಿ ನೂರಾರು ಕೋಟಿ ವೌಲ್ಯದ ಬೇನಾಮಿ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಹೀಗಾಗಿ, ಆದಾಯ ತೆರಿಗೆ ಇಲಾಖೆಯು ಬೇನಾಮಿ ಆಸ್ತಿಯನ್ನು ಮುಟ್ಟುಗೋಲು ಹಾಕಲು ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News