ಬರ ಪರಿಸ್ಥಿತಿ ಎದುರಿಸಲು ವಿಫಲವಾದ ಸರ್ಕಾರದ ವಿರುದ್ಧ ರಾಜಭವನ ಚಲೋ: ಬಡಗಲಪುರ ನಾಗೇಂದ್ರ

Update: 2019-06-20 17:36 GMT

ಮೈಸೂರು, ಜೂ.20: ರಾಜ್ಯದಲ್ಲಿ ಆವರಿಸಿರುವ ಬರ ಪರಿಸ್ಥಿತಿ ಎದುರಿಸಲು ವಿಫಲವಾಗಿರುವ ಸರ್ಕಾರದ ವಿರುದ್ಧ ರೈತ ಸಂಘದಿಂದ ರಾಜಭವನ ಚಲೋ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಉತ್ತರ, ಹೈದ್ರಾಬಾದ್ ಕರ್ನಾಟಕಗಳಲ್ಲಿ ಭೀಕರ ಬರ ಆವರಿಸಿದೆ, ಕುಡಿಯುವ ನೀರಿಗೂ ಜನರು ಸಂಕಷ್ಟಪಡುವಂತ ಸ್ಥಿತಿ ಎದುರಾಗಿದ್ದು ಆ ಪ್ರದೇಶದಲ್ಲಿ ಬೆಳೆದಿರುವ ದಾಳಿಂಬೆ, ಕಬ್ಬು ಹಾಗೂ ಇತರ ಬೆಳೆಗಳು ಸಂಪೂರ್ಣ ನೆಲ ಕಚ್ಚಿದೆ. ಹೀಗಿದ್ದರೂ ಸರ್ಕಾರ ಬರ ಸಮಸ್ಯೆಗೆ ಸ್ಪಂದಿಸದೇ ಕೇವಲ ಅಧಿಕಾರಕ್ಕಾಗಿ ಕಿತ್ತಾಟ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ದಿ.13 ರಿಂದ 18ರವರೆಗೆ ಉತ್ತರ ಕರ್ನಾಟಕದ ಪ್ರವಾಸದಲ್ಲಿ ಕಂಡು ಬಂದಂತಹ ಘಟನೆಗಳನ್ನು ಉಲ್ಲೇಖಿಸಿ ರೈತರು ಸೂಕ್ತ ಕಾಲದಲ್ಲಿ ಮಳೆಯಿಲ್ಲದೇ ಸಂಕಷ್ಟ ಎದುರಿಸುತ್ತಿದ್ದಾರೆ. ರಾಜ್ಯದಲ್ಲಿ ಮುಂಬೈ, ಹೈದ್ರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕ ಹಾಗೂ ಹಳೆ ಮೈಸೂರಿನ ಭಾಗಶಃ ಇದೇ ಪರಿಸ್ಥಿತಿ ಇದೆ. ಹೀಗಿದ್ದರೂ ರಾಜ್ಯ ಸರ್ಕಾರ ಕುರ್ಚಿ ಉಳಿಸಿಕೊಳ್ಳುವುದೇ ಕಾಯಕ ಮಾಡಿಕೊಂಡಿರುವುದನ್ನು ಖಂಡಿಸಿ ರಾಜಭವನ ಚಲೋ ಚಳುವಳಿ ನಡೆಸಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಬ್ಬಿನ ಬಾಕಿ ಪಾವತಿಗೂ ಒತ್ತಾಯಿಸಿ ಸರ್ಕಾರ ಬಾಕಿ ಉಳಿಸಿಕೊಂಡಿರುವ ಕೋಟ್ಯಾಂತರ ರೂ. ಗಳ ಬಾಕಿ ಹಣವನ್ನು ಈ ಕೂಡಲೇ ಪಾವತಿಸಬೇಕು ಹಾಗೂ ಮಂಡ್ಯ, ಪಾಂಡವಪುರ ಮತ್ತು ಚುಂಚನಕಟ್ಟೆಯ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ನುರಿಸುವ ಕಾರ್ಯ ಆರಂಭಿಸಬೇಕು ಹಾಗೂ ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.

ಕಾಫಿ ಹಾಗೂ ಮೆಣಸು ಬೆಳೆಗಾರರ ಸಮಸ್ಯೆ ಚರ್ಚಿಸಲು ಗೋಣಿಕೊಪ್ಪಲಿನಲ್ಲಿ ಜೂ.23ರಂದು ಬೆಳಗ್ಗೆ 11 ಗಂಟೆಗೆ ಸಭೆ ನಡೆಸಿ ಚರ್ಚಿಸಲಾಗುವುದು ಎಂದರು.

ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ಜುಲೈ ಮೊದಲ ವಾರದಲ್ಲಿ ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ ರಾಜಭವನವರೆಗೂ ಸಾವಿರಾರು ರೈತ ಪದಾಧಿಕಾರಿಗಳು ಪ್ರತಿಭಟನೆ ಮೆರವಣಿಗೆ ತೆರಳಿ, ನಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾರ್ಗದರ್ಶನಕ್ಕೆ ಒತ್ತಾಯಿಸಲಾಗುವುದು ಎಂದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜ್ ಮಾತನಾಡಿ, ಸಾಲ ಮನ್ನಾ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು, ಭತ್ತ ಖರೀದಿ ಕೇಂದ್ರ ಆರಂಭಿಸಬೇಕು ಹಾಗೂ ಪವರ್ ಗ್ರೀಡ್ ವಿದ್ಯುತ್ ಮಾರ್ಗವನ್ನು ಬದಲಾಯಿಸಬೇಕೆಂದು ಆಗ್ರಹಿಸಿ ಜೂ.24ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೆಳಗ್ಗೆ 11 ಗಂಟೆಯಿಂದ ಬೃಹತ್ ಪ್ರತಿಭಟನೆ ನಡೆಸಲಿದ್ದು, ಅದಕ್ಕೂ ಮುನ್ನ ಗನ್ ಹೌಸ್ ವೃತ್ತದಿಂದ ಮೆರವಣಿಗೆಯಲ್ಲಿ ಸಾವಿರಾರು ರೈತರು ತೆರಳಲಿದ್ದೇವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಹೆಚ್.ಸಿ.ಲೋಕೇಶರಾಜ್ ಅರಸ್, ಬಸವೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News