ಹನೂರು: 76 ಜೋಡಿಗಳ ಉಚಿತ ಸಾಮೂಹಿಕ ವಿವಾಹ

Update: 2019-06-20 17:49 GMT

ಹನೂರು, ಜೂ.20: ಸಾಮೂಹಿಕ ವಿವಾಹಗಳು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವರದಾನವಾಗಿವೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.

ಹನೂರು ತಾಲೂಕಿನ ಮಲೈಮಹದೇಶ್ವರ ಬೆಟ್ಟದಲ್ಲಿ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರ ವತಿಯಿಂದ ನಡೆದ ಉಚಿತ ಸಾಮೂಹಿಕ ವಿವಾಹದಲ್ಲಿ 76 ನವ ಜೋಡಿಗಳು ನೂತನ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಮಲೈಮಹದೇಶ್ವರ ಬೆಟ್ಟದಲ್ಲಿ ಸತತವಾಗಿ 30 ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರಿಂದ ಬಡವರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ ಎಂದು ಹೇಳಿದರು.

ಶಾಸಕ ನರೇಂದ್ರ ಮಾತನಾಡಿ, 12 ನೇ ಶತಮಾನದಲ್ಲಿ ಬಸವಣ್ಣನವರು ಕನಸು ಕಂಡಿದ್ದ ಅಂತರ್ಜಾತಿ ವಿವಾಹದ ಪರಿಕಲ್ಪನೆಗೆ ಇಂದು ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಬೆಳಕು ಚೆಲ್ಲಿದೆ ಎಂದ ಅವರು, ಪ್ರತಿಯೊಬ್ಬರೂ ಪರಸ್ಪರ ಹೊಂದಾಣಿಕೆಯಿಂದ ಜೀವನವನ್ನು ನಡೆಸಿ ಅನ್ಯರಿಗೆ ಮಾದರಿ ವ್ಯಕ್ತಿಗಳಾಗಿ ಎಂದು ಹೇಳಿದರು.

ಬೆಳಗ್ಗೆ ಸಾಲೂರು ಬೃಹನ್ಮಠಾಧ್ಯಕ್ಷ ಗುರುಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ಸಾಮೂಹಿಕ ವಿವಾಹವು ನಡೆಯಿತು. ವಿವಾಹ ಕಾರ್ಯಕ್ರಮದಲ್ಲಿ ಪ್ರಾಧಿಕಾರದ ವತಿಯಿಂದ ವಧುವಿಗೆ ಚಿನ್ನದ ತಾಳಿ, ಕಾಲುಂಗುರ, ಸೀರೆ, ರವಿಕೆ ಹಾಗೂ ವರನಿಗೆ ಪಂಚೆ, ಶರ್ಟ್, ಟವಲ್ ನೀಡಲಾಗಿತ್ತು. ಊಟದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. 

ಗಮನ ಸೆಳೆದ ಮಹೇಶ್-ಕಾವ್ಯ ಜೋಡಿ: ಸಾಮೂಹಿಕ ವಿವಾಹದ 76 ಜೋಡಿಗಳ ಪೈಕಿ 10 ಜೋಡಿಗಳು ಅಂತರ್ಜಾತಿ ವಿವಾಹವಾದರು. ಯಳಂದೂರು ತಾಲೂಕಿನ ಹಂಬಳೆ ಗ್ರಾಮದ ವಿಕಲಚೇತನ ಮಹೇಶ್ ಜೊತೆ ಅದೇ ಗ್ರಾಮದ ಆರ್.ಕಾವ್ಯ ಸತಿ ಪತಿಗಳಾಗಿ ನೂತನ ಬಾಳಿಗೆ ಪಾದಾರ್ಪಣೆ ಮಾಡಿರುವುದು ವಿಶೇಷವಾಗಿತ್ತು.

ಸಮಾರಂಭದಲ್ಲಿ ಜಿ.ಪಂ. ಅಧ್ಯಕ್ಷೆ ಶಿವಮ್ಮ, ತಾಪಂ ಅಧ್ಯಕ್ಷ ರಾಜೇಂದ್ರ, ಜಿಲ್ಲಾಧಿಕಾರಿ ಕಾವೇರಿ, ಮಲೈಮಹದೇಶ್ವರ ಬೆಟ್ಟದ ಕಾರ್ಯದರ್ಶಿ ಸಿ.ಎಲ್ ಆನಂದ್, ತಹಶೀಲ್ದಾರ್ ನಾಗರಾಜು, ಗ್ರಾಪಂ ಅಧ್ಯಕ್ಷೆ ರುಕ್ಮಿಣಿ, ಪ್ರಾಧಿಕಾರದ ಉಪಕಾರ್ಯದರ್ಶಿ ರಾಜಶೇಖರ್, ವ್ಯವಸ್ಥಾಪಕ ಬಸವರಾಜು ಸೇರಿ ಅನೇಕರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News