ಯಾವುದೇ ಸಮುದಾಯವನ್ನು ನಿಂದಿಸಿಲ್ಲ, ನೋವಾಗಿದ್ದರೆ ಕ್ಷಮಿಸಿ: ಮಾಜಿ ಶಾಸಕ ಸುರೇಶ್‍ ಗೌಡ

Update: 2019-06-20 17:59 GMT

ತುಮಕೂರು,ಜೂ.20: ಪೊಲೀಸ್ ಸಮುದಾಯವನ್ನು ಟೀಕಿಸುವ ಭರದಲ್ಲಿ ಕುರುಬ ಸಮುದಾಯವನ್ನು 420 ಎಂದು ಹೇಳಿಕೆ ನೀಡಿದ್ದ ಮಾಜಿ ಶಾಸಕ ಸುರೇಶ್‍ಗೌಡ ಅವರು ಕುರುಬ ಸಮುದಾಯದ ಕ್ಷಮೆಯಾಚಿಸಿದ್ದು, ನನ್ನ ಹೇಳಿಕೆಯಿಂದ ಸಮುದಾಯಕ್ಕೆ ನೋವಾಗಿದ್ದರೆ ಕ್ಷಮಿಸುವಂತೆ ಕೋರಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಹೆಬ್ಬೂರು ಠಾಣೆಯ ಪೊಲೀಸ್ ಸಿಬ್ಬಂದಿಯಾಗಿರುವ ವ್ಯಕ್ತಿಗಷ್ಟೇ ಸೀಮಿತವಾಗಿ ನಾನು ಮಾತನಾಡಿದ್ದೇನೆ ಹೊರತು, ಸಮುದಾಯವನ್ನು ಉದ್ದೇಶಿಸಿ ಅಲ್ಲ. ನನ್ನ ಹೇಳಿಕೆಯನ್ನು ತಿರುಚಿ ರಾಜಕೀಯಗೊಳಿಸುವ ಹುನ್ನಾರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯನ್ನು ಮುಗಿಸಿ ಹೊರಬರುತ್ತಿದ್ದವರ ಮೇಲೆ ಹಲ್ಲೆ ಮಾಡಲು ಯತ್ನಿಸಿದ ರಾಜಕೀಯ ವ್ಯಕ್ತಿಗಳೊಂದಿಗೆ ಆ ಸಿಬ್ಬಂದಿ ಹೊಯ್ಸಳ ಹೊಟೇಲ್‍ನಲ್ಲಿ ಕುಳಿತು ಸಮುದಾಯವನ್ನು ಎತ್ತಿಕಟ್ಟುವ ಕೆಲಸವನ್ನು ಮಾಡುತ್ತಿದ್ದು, ಕುರುಬ ಸಮುದಾಯವನ್ನು ನಾನು ನಿಂದಿಸಿಲ್ಲ. ನನ್ನಿಂದ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮಿಸುವಂತೆ ಕೋರಿದ ಅವರು, ಪ್ರಕರಣವನ್ನು ರಾಜಕೀಯ ಕರಣಗೊಳಿಸದಂತೆ ಶಾಸಕ ಗೌರಿಶಂಕರ್ ಅವರಲ್ಲಿ ಮನವಿ ಮಾಡಿದರು.

ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕುರುಬ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೇನೆ. ಸಮುದಾಯವನ್ನು ನಾನು ಅವಹೇಳನ ಮಾಡಿಲ್ಲ, ನಾನು ತಪ್ಪು ಮಾಡಿಲ್ಲ. ಆದರೂ ಸಮುದಾಯದ ಕ್ಷಮೆ ಕೋರುತ್ತೇನೆ. ಸಮುದಾಯಕ್ಕಿಂತ ದೊಡ್ಡ ವ್ಯಕ್ತಿ ನಾನಲ್ಲ. ಹಾಗಾಗಿ ಕ್ಷಮೆ ಕೋರುತ್ತೇನೆ. ಪೊಲೀಸ್ ಸಿಬ್ಬಂದಿ ಅವರ ಕಾರ್ಯವನ್ನು ಮಾಡಿದರೆ ಅದಕ್ಕೆ ನನ್ನ ಆಕ್ಷೇಪಣೆ ಇಲ್ಲ. ಆದರೆ ಇಂತಹ ಸಮುದಾಯವನ್ನು ಎತ್ತಿಕಟ್ಟುವ ಕೆಲಸ ಮಾಡಬಾರದು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ಹುಲಿನಾಯ್ಕರ್, ಜಿ.ಪಂ.ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿ.ಪಂ.ಸದಸ್ಯ ವೈ.ಎಚ್.ಹುಚ್ಚಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಬೆಂಗಾವಲಿನಲ್ಲಿ ಸುದ್ದಿಗೋಷ್ಠಿ: ಮಾಜಿ ಶಾಸಕ ಸುರೇಶ್‍ಗೌಡ ಅವರು ಖಾಸಗಿ ಹೋಟೇಲ್‍ನಲ್ಲಿ ಕರೆದಿದ್ದ ಸುದ್ದಿಗೋಷ್ಠಿ ವೇಳೆಯಲ್ಲಿ ಜೆಡಿಎಸ್ ಮುಖಂಡರೊಬ್ಬರ ಹುಬ್ಬಹಬ್ಬದ ಸಂಭ್ರಮಾಚರಣೆ ಕಾರ್ಯಕ್ರಮ ಇದ್ದುದರಿಂದ ಕಾರ್ಯಕರ್ತರ ನಡುವೆ ಗಲಾಟೆ ನಡೆಯಬಹುದು ಎಂದು ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು. ಪೊಲೀಸರ ಬೆಂಗಾವಲಿನಲ್ಲಿ ಬಂದು ಸುರೇಶ್‍ಗೌಡ ಅವರು ಸುದ್ದಿಗೋಷ್ಠಿ ನಡೆಸಿದ್ದು ತುಮಕೂರು ಮಟ್ಟಿಗೆ ಹೊಸ ಸಂಪ್ರದಾಯವನ್ನು ಹುಟ್ಟುಹಾಕಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News