ಬೆಳೆಗಳಿಗೆ ನೀರು ಬಿಡುಗಡೆಗೆ ಸುಮಲತಾ ಮನವಿ: ಕೇಂದ್ರ ಜಲ ಸಂಪನ್ಮೂಲ ಸಚಿವರಿಗೆ ಮನವಿ ಪತ್ರ

Update: 2019-06-20 18:11 GMT

ಮಂಡ್ಯ, ಜೂ.20: ಕೇಂದ್ರದ ನೂತನ ಜಲ ಸಂಪನ್ಮೂಲ ಸಚಿವ ಗಜೇಂದ್ರಸಿಂಗ್ ಶೆಖಾವತ್ ಅವರನ್ನು ಗುರುವಾರ ಭೇಟಿ ಮಾಡಿ ಅಭಿನಂದಿಸಿರುವ ಸಂಸದೆ ಸುಮಲತಾ ಅಂಬರೀಷ್, ಒಣಗುತ್ತಿರುವ ಬೆಳೆಗಳ ರಕ್ಷಣೆಗೆ ಕೆಆರ್‍ಎಸ್ ಜಲಾಶಯದಿಂದ ತಕ್ಷಣ 2 ಟಿಎಂಸಿ ಅಡಿ ನೀರು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯ ಶೇ.90ರಷ್ಟು ಕೃಷಿ ಭೂಮಿ ಕೆಆರ್‍ಎಸ್ ಜಲಾಶಯದ ಸಂಗ್ರಹಿತ ನೀರನ್ನು ಅವಲಂಬಿಸಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಳೆಯ ಕೊರತೆಯಿಂದ ಜಲಾಶಯಕ್ಕೆ ಸಾಕಷ್ಟು ನೀರು ಬರುತ್ತಿಲ್ಲ. ಈ ವರ್ಷವೂ ಮಳೆ ಬಂದಿಲ್ಲ. ಈ ಕಾರಣದಿಂದ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ಕಬ್ಬು, ರಾಗಿ, ಹಿಪ್ಪುನೇರಳೆ, ತೆಂಗು, ಬಾಳೆ, ಇನ್ನಿತರೆ ಬೆಳೆಗಳು ಮಳೆಯಿಲ್ಲದೆ ಒಣಗಿ ಹೋಗುತ್ತಿವೆ. ಜಲಾಶಯದಲ್ಲಿ ಇರುವ ನೀರಿನಲ್ಲಿ 2 ಟಿಎಂಸಿ ಅಡಿ ನೀರನ್ನು ನಾಲೆಗಳಿಗೆ ಬಿಡುಗಡೆ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರನ್ನೂ ಭೇಟಿ ಮಾಡಿರುವ ಸುಮಲತಾ, ಅವರಿಗೂ ನಾಲೆಯಲ್ಲಿ ನೀರು ಹರಿಸುವಂತೆ ಕ್ರಮ ವಹಿಸಬೇಕೆಂದು ಮನವಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News