ದೇಹ, ಮನಸ್ಸು, ಆತ್ಮವನ್ನು ಐಕ್ಯಗೊಳಿಸುವ ವಿಶಿಷ್ಟ ಶಕ್ತಿ ಯೋಗಕ್ಕಿದೆ: ಪೇಜಾವರ ಶ್ರೀ

Update: 2019-06-21 13:16 GMT

ದಾವಣಗೆರೆ, ಜೂ.21: ಯೋಗದಿಂದ ಆಧ್ಯಾತ್ಮಿಕ ಸಾಧನೆ ಸಾಫಲ್ಯವಾಗುತ್ತದೆ. ದೇಹ, ಮನಸ್ಸು ಮತ್ತು ಆತ್ಮವನ್ನು ಐಕ್ಯಗೊಳಿಸುವ ವಿಶಿಷ್ಟ ಶಕ್ತಿ ಯೋಗಕ್ಕಿದ್ದು, ಇಂತಹ ಯೋಗಶಾಸ್ತ್ರವು ನಮ್ಮ ದೇಶದ ದೊಡ್ಡ ಕೊಡುಗೆಯಾಗಿದೆ ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ್ವರ ಶ್ರೀಗಳು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಹಾಗೂ ಜಿಲ್ಲಾ ಯೋಗ ಒಕ್ಕೂಟ ಸಂಯುಕ್ತಾಶ್ರಯದಲ್ಲಿ ವಿವಿಧ ಇಲಾಖೆ, ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಮೋತಿ ವೀರಪ್ಪ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದ್ದ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಸಾನಿಧ್ಯ ವಹಿಸಿ ಅವರು ಮಾತನಾಡಿದರು. 

ಯೋಗ ಎಂಬುದು ಆಸನ, ಪ್ರಾಣಾಯಾಮ, ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನೂ ಮೀರಿದ್ದಾಗಿದೆ. ಯೋಗದ ವ್ಯಾಪ್ತಿ ಮತ್ತು ಸ್ವರೂಪ ಹೇಳುವುದು ಕಷ್ಟ. ಸಮತೆಯನ್ನು ಸಾರುವ ಯೋಗವು ಯಾವುದೇ ಧರ್ಮ, ಜಾತಿಗೆ ಸೀಮಿತವಾದುದಲ್ಲ ಎಂದರು.

ಜಿ.ಪಂ. ಅಧ್ಯಕ್ಷೆ ಶೈಲಜಾ ಬಸವರಾಜ್ ಮಾತನಾಡಿ, ಚಿಕ್ಕವರಿದ್ದಾಗ ನಾವು ಸ್ವಾಭಾವಿಕವಾಗಿ ಯೋಗಿಗಳಾಗಿರುತ್ತೇವೆ. ಬೆಳೆಯುತ್ತಾ ಎಲ್ಲವನ್ನೂ ಮರೆಯುತ್ತಾ ಹೋಗುತ್ತೇವೆ. ಆದ್ದರಿಂದ ನಮಗೆಲ್ಲ ಮಗುವಿನ ಪರಿಶುದ್ದ ಮನಸ್ಸು ಬೇಕಿದೆ. ಈ ಮಗುವಿನ ಪರಿಶುದ್ದ ಮನಸ್ಸು ಪಡೆಯಲು ಯೋಗಾಭ್ಯಾಸ ಅವಶ್ಯವಾಗಿದೆ ಎಂದರು.

ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ಪ್ರಧಾನಿ ಮೋದಿಯವರು ಎಲ್ಲರಿಗೂ ಯೋಗದ ಬಗ್ಗೆ ತಿಳಿಸಲು ವಿಶ್ವ ಯೋಗ ದಿನಾಚರಣೆಗೆ ಕಾರಣಕರ್ತರಾಗುವ ಮೂಲಕ ವಿಶ್ವಕ್ಕೇ ಯೋಗದ ಮಹತ್ವ ಸಾರಿದ್ದಾರೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಮಾತನಾಡಿ, ನಮ್ಮೆಲ್ಲರ ಉತ್ತಮ ಆರೋಗ್ಯ ಮತ್ತು ದೇಶದ ಶಿಸ್ತು ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಯೋಗಾಭ್ಯಾಸದಿಂದ ದೇಹ ಮತ್ತು ಮನಸ್ಸು ಆರೋಗ್ಯದಿಂದ ಕೂಡಿರಲು ಸಾಧ್ಯ ಎಂದರು.

ಯೋಗ ಪ್ರಾತ್ಯಕ್ಷಿಕೆ : ವೈದ್ಯಶ್ರೀ ಚನ್ನಬಸವಣ್ಣನವರು ಶಿಷ್ಟಾಚಾರದಂತೆ 45 ನಿಮಿಷಗಳ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಪ್ರಾರ್ಥನೆಯೊಂದಿಗೆ ಯೋಗ ಆರಂಭಿಸಿ ವಿವಿಧ ಆಸನಗಳನ್ನು ಮಾಡಿಸಿ ಅವುಗಳಿಂದ ದೇಹ ಮತ್ತು ಮನಸ್ಸಿಗೆ ಆಗುವ ಉಪಯೋಗಗಳ ಬಗ್ಗೆ ವಿವರಿಸಿದರು. ನಂತರ ಪ್ರಾಣಾಯಾಮ ಹೇಳಿಕೊಟ್ಟರು.

ಜಿಲ್ಲಾ ಯೋಗ ಒಕ್ಕೂಟದ ವಾಸುದೇವ್ ರಾಯ್ಕರ್ ನಿರೂಪಿಸಿದರು. ಈಶ್ವರೀಯ ವಿಶ್ವವಿದ್ಯಾಲಯ ಲೀಲಕ್ಕ ಧ್ಯಾನ ಕಾರ್ಯಕ್ರಮ ನಡೆಸಿಕೊಟ್ಟರು. ಜಿಲ್ಲಾ ಆಯುಷ್ ಅಧಿಕಾರಿ ಡಾ.ಸಿದ್ದೇಶಿ, ಜಿ.ಪಂ. ಸದಸ್ಯರಾದ ಮಂಜುಳಾ ಟಿ.ವಿ ರಾಜು, ಗೀತಾ ಗಂಗಾನಾಯ್ಕ, ಜಿ.ಪಂ. ಸಿಇಓ ಹೆಚ್.ಬಸವರಾಜೇಂದ್ರ, ಉಪ ಕಾರ್ಯದರ್ಶಿ ಭೀಮಾನಾಯ್ಕ, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಎಸ್‍ಬಿಐ ಡಿಜಿಎಂ ಇಂಧ್ರಕುಮಾರ್ ಭಾಂಜ, ಆದಿಚುಂಚನಗಿರಿ ಮಠದ ಆಡಳಿತಾಧಿಕಾರಿ ರಾಮಕೃಷ್ಣ ಗೌಡ, ಯೋಗ ಒಕ್ಕೂಟದ ಜಿಲ್ಲಾಧ್ಯಕ್ಷ ಬಿ.ಸಿ.ಉಮಾಪತಿ, ಮಾಜಿ ಅಧ್ಯಕ್ಷ ಎ.ಹೆಚ್.ಶಿವಮೂರ್ತಿ ಸ್ವಾಮಿ, ಯೋಗ ಒಕ್ಕೂಟದ ಎಂ.ಶಿವಪ್ಪ ಸೇರಿದಂತೆ ವಿವಿಧ ಯೋಗ ಸಂಸ್ಥೆಗಳ ಪದಾಧಿಕಾರಿಗಳು ವೇದಿಕೆ ಮೇಲೆ ಹಾಜರಿದ್ದು ಯೋಗ ಪ್ರದರ್ಶಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News