ಗ್ರಾಮಗಳಲ್ಲಿ ಮಲಗುವುದರಿಂದ ರೈತರ ಉದ್ದಾರ ಸಾಧ್ಯವಿಲ್ಲ: ರೈತ ಸಂಘ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್

Update: 2019-06-21 13:20 GMT

ದಾವಣಗೆರೆ, ಜೂ.21: ಗ್ರಾಮಗಳಲ್ಲಿ ಮಲಗುವುದರಿಂದ ರೈತರ ಉದ್ದಾರ ಸಾಧ್ಯವಿಲ್ಲ ಎಂದು ರೈತ ಸಂಘ ಮತ್ತು ಹಸಿರುಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸಿಎಂ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂಸ್ವಾಧೀನ ಕಾಯ್ದೆ-2013ಕ್ಕೆ ತಿದ್ದುಪಡಿ ತರುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ಮೂಲಕ ಮುಖ ಉಳಿಸಿಕೊಳ್ಳಲು ಹೊರಟಿದ್ದಾರೆ. ಆದರೆ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಮಾಡುವ ದ್ರೋಹ, ಅನ್ಯಾಯ ಗ್ರಾಮ ವಾಸ್ತವ್ಯದಿಂದ ನೀಗುವುದಿಲ್ಲ. ರೈತರನ್ನು ದಿವಾಳಿ ಮಾಡಿಬಂದು ಹಳ್ಳಿಗಳಲ್ಲಿ ಮಲಗಿದರೆ ಕೃಷಿಕರು ಉದ್ಧಾರವಾಗುತ್ತಾರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಶುಕ್ರವಾರ ಹಿಂದಿನ ಯುಪಿಎ ಸರ್ಕಾರ ಜಾರಿಗೊಳಿಸಿದ್ದ 2013ರ ಭೂಸ್ವಾಧೀನ ಕಾಯ್ದೆಯಲ್ಲಿ ರೈತಪರವಾದ ಅನೇಕ ಅಂಶಗಳಿದ್ದವು. ರೈತರ ಅನುಮತಿ ಇಲ್ಲದೇ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವಂತಿರಲಿಲ್ಲ. ಭೂ ಸ್ವಾಧೀನವು ಸಾರ್ವಜನಿಕ ಉದ್ದೇಶ ಹೊಂದಿರಬೇಕಿತ್ತು. ಭೂ ಸ್ವಾಧೀನ ಅನಿವಾರ್ಯವಾದರೆ ರೈತರಿಗೆ ನಗರ ಪ್ರದೇಶದಲ್ಲಿ ಜಮೀನಿನ ಮಾರುಕಟ್ಟೆ ದರಕ್ಕಿಂತ ಎರಡು ಪಟ್ಟು ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಾಲ್ಕು ಪಟ್ಟು ಪರಿಹಾರ ನೀಡಬೇಕಿತ್ತು. ಇದೆಲ್ಲವನ್ನೂ ಹೊಸ ತಿದ್ದುಪಡಿ ಕಾಯ್ದೆಯಲ್ಲಿ ತೆಗೆದುಹಾಕಿ, ಜಿಲ್ಲಾಧಿಕಾರಿಗಳಿಗೆ ಭೂಸ್ವಾಧೀನಕ್ಕೆ ಪರಮಾಧಿಕಾರ ನೀಡಲಾಗಿದೆ. ಆದರೂ ತಮ್ಮದು ರೈತಪರ ಸರ್ಕಾರವೆಂದು ಹೇಳಿಕೊಳ್ಳುವ ಸಿಎಂ ಕುಮಾರಸ್ವಾಮಿಗೆ ನಾಚಿಕೆಯಾಗಬೇಕು ಎಂದು ಹೇಳಿದರು.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ, ಕಾಂಗ್ರೆಸ್ ಪ್ರಧಾನಿಗಳೇ ಹಿಂದಿನ ಭೂಸ್ವಾಧೀನ ಕಾಯ್ದೆ ಜಾರಿಗೆ ತಂದಿದ್ದರು. ಇದೀಗ ಮೈತ್ರಿ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ ನಾಯಕರೇ ಕಾಯ್ದೆ ತಿದ್ದುಪಡಿಗೆ ಒಪ್ಪಿಗೆ ಸೂಚಿಸಿರುವುದು ನಾಚಿಕೆಗೇಡು. ಅವರದ್ದೇ ಪಕ್ಷ, ಸರ್ಕಾರ ಜಾರಿಗೊಳಿಸಿದ್ದ ಕಾಯ್ದೆ ಕುರಿತು ಕಾಂಗ್ರೆಸ್ಸಿಗರಿಗೇ ಗೌರವವಿಲ್ಲ ಎಂದರು.

ನೈಸ್ ಕಂಪನಿ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ಬರಲು ಮೈತ್ರಿ ಸರ್ಕಾರವೇ ಕಾರಣ. ಮುಗಿದು ಹೋಗಿದ್ದ ಪ್ರಕರಣಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅಫಿಡವಿಟ್ ಸಲ್ಲಿಸುವ ಮೂಲಕ ನೈಸ್ ಕಂಪನಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಹಿಂದೆ ನೈಸ್ ಕಂಪನಿ ವಿರುದ್ಧ ಹೋರಾಟ ಕೈಗೊಂಡಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಈಗ ತಮ್ಮ ಮಗನದ್ದೇ ಸರ್ಕಾರದ ವಿರುದ್ಧ ಹೋರಾಟ ಕೈಗೊಂಡು, ರೈತರಿಗೆ ಆಗಿರುವ ಅನ್ಯಾಯ ಸರಿಪಡಿಸಲಿ ಎಂದು ಅವರು ಸವಾಲು ಹಾಕಿದರು.

ಪರಿಸರ ಮಾಲಿನ್ಯದ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಅನುಮತಿ ನಿರಾಕರಿಸಿದ್ದ ಜಿಂದಾಲ್ ಕೆಮಿಕಲ್ ಕಲರ್ ಕೈಗಾರಿಕೆಗೆ 3667 ಎಕರೆ ಜಮೀನು ನೀಡಲು ಸಿಎಂ ಕುಮಾರಸ್ವಾಮಿ ಸಂಪುಟ ತೀರ್ಮಾನಿಸಿದೆ. ವಿರೋಧದ ಕಾರಣ ಉಪಸಮಿತಿ ರಚಿಸಿದ್ದರೂ, ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್‍ರಂತಹವರೇ ಇರುವ ಉಪಸಮಿತಿಯಿಂದ ನ್ಯಾಯ ನಿರೀಕ್ಷಿಸುವುದು ಸಾಧ್ಯವಿಲ್ಲ. ಭೂಮಿಯನ್ನು ಬೇಕಿದ್ದರೆ ಲೀಸ್ ಕೊಡಬಹುದಿತ್ತು, ಮಾರಾಟ ಮಾಡುವುದು ಮೂರ್ಖತನ ಎಂದು ಟೀಕಿಸಿದರು.

ಸಂಘಟನೆ ಮುಖಂಡರಾದ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಹುಚ್ಚವ್ವನಹಳ್ಳಿ ಗಣೇಶ, ಶೇಖರಪ್ಪ, ಹೊನ್ನೂರು ರಾಜು ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News