‘ಜಲಧಾರೆ ಯೋಜನೆ’ಯಡಿ ಕುಡಿಯುವ ನೀರು ಪೂರೈಕೆಗೆ 1 ಸಾವಿರ ಕೋಟಿ ರೂ.: ಸಿಎಂ ಕುಮಾರಸ್ವಾಮಿ

Update: 2019-06-21 13:33 GMT

ಯಾದಗಿರಿ, ಜೂ. 21: ‘ಜಲಧಾರೆ ಯೋಜನೆ’ಯಡಿ ನದಿಯ ಮೂಲದ ನೀರನ್ನು ಜಿಲ್ಲೆಯ ನಾಲ್ಕೂ ಕ್ಷೇತ್ರಗಳ ಪ್ರತಿಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು 1 ಸಾವಿರ ಕೋಟಿ ರೂ. ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ಶುಕ್ರವಾರ ಜಿಲ್ಲಾಡಳಿತದ ಆಶ್ರಯದಲ್ಲಿ ಗುರುಮಿಟ್ಕಲ್ ತಾಲೂಕಿನ ಚಂಡ್ರಕಿ ಗ್ರಾಮದಲ್ಲಿ ಏರ್ಪಡಿಸಿದ್ದ ಸಿಎಂ ಜನತಾ ದರ್ಶನ, ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗುರುಮಿಟ್ಕಲ್ ಕ್ಷೇತ್ರದಲ್ಲಿ 31.97 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಸುಮಾರು 20 ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದೇನೆ ಎಂದರು.

ಈ ಹಿಂದೆ 2006ರಲ್ಲಿ ಗ್ರಾಮವಾಸ್ತವ್ಯ ಮಾಡಿದ್ದು ಫಲಪ್ರದವಾಗಿದೆ. ಈ ಬಾರಿ ಪ್ರತಿ ತಿಂಗಳು ಒಂದು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗುವುದು. ಚಂಡ್ರಕಿ ಗ್ರಾಮದಿಂದ ಈ ಕಾರ್ಯಕ್ರಮ ಆರಂಭವಾಗಿದೆ. ಗ್ರಾಮಸ್ಥರ ಬೇಡಿಕೆಯಂತೆ ಪಶುಚಿಕಿತ್ಸಾಲಯ ಮಂಜೂರು ಮಾಡಲಾಗಿದೆ. ಪಶುವೈದ್ಯಾಧಿಕಾರಿಗಳನ್ನೂ ನೇಮಕ ಮಾಡಲಾಗಿದೆ. ಉತ್ತಮ ಆರೋಗ್ಯ ವ್ಯವಸ್ಥೆ ಕಲ್ಪಿಸಲು ಜಿಲ್ಲೆಯಲ್ಲಿ 300 ಹಾಸಿಗೆಗಳ ಜಿಲ್ಲಾಸ್ಪತ್ರೆ ಮಂಜೂರಾತಿಗೆ ಇಂದು ಆದೇಶ ಮಾಡಲಾಗಿದೆ.

ಜಿಲ್ಲಾಸ್ಪತ್ರೆಯಲ್ಲಿ ಸುಸಜ್ಜಿತ ತೀವ್ರ ನಿಗಾ ಘಟಕದ ಗುಣಮಟ್ಟ ಸುಧಾರಣೆ, ಆಸ್ಪತ್ರೆ ತಲುಪಲು ಅಗತ್ಯವಿರುವ ಸಂಪರ್ಕ ರಸ್ತೆ ನಿರ್ಮಿಸಲಾಗುವುದು. ಗ್ರಾಮ ವಾಸ್ತವ್ಯದ ಮೂಲಕ ಸಾರ್ವಜನಿಕರ ಅರ್ಜಿಗಳನ್ನು ಪರಿಶೀಲಿಸಲಾಗುವುದು. ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಸಾಧ್ಯವಿರುವ ಕಾರ್ಯಗಳಿಗೆ ಆದೇಶ ನೀಡಲಾಗುವುದು. ಶಹಾಪುರ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಅನುಷ್ಠಾನಗೊಳಿಸಲು ಸಂಬಂಧಿಸಿದ ಇಲಾಖೆಗೆ ಸೂಚಿಸಲಾಗಿದೆ. ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಪೂರೈಕೆ ಯೋಜನೆಗೂ ಕ್ರಮ ವಹಿಸಲಾಗುವುದು ಎಂದರು.

ಸಾಲಮನ್ನಾ ಯೋಜನೆಯಡಿ 302 ಕೋಟಿ ರೂ.ಗಳನ್ನು ಸಹಕಾರ ಬ್ಯಾಂಕುಗಳಿಗೆ ಬಿಡುಗಡೆ ಮಾಡಿದೆ. 75ಸಾವಿರ ರೈತರಿಗೆ ಈಗಾಗಲೇ ಸೌಲಭ್ಯ ದೊರೆತಿದೆ. ಉಳಿದ ರೈತರ ಸಾಲದ ಖಾತೆಗೆ ಜಮೆಯಾಗಬೇಕಿದ್ದ ಹಣವನ್ನು, ಸಹಕಾರ ಬ್ಯಾಂಕುಗಳಿಂದ ಅಪೆಕ್ಸ್ ಬ್ಯಾಂಕ್‌ಗಳಿಗೆ ಬಾಕಿ ಇರುವ ಕಾರಣಕ್ಕೆ ಆ ರಂಗದವರು ತಡೆಹಿಡಿದಿದ್ದಾರೆ. ಇದರಿಂದಾಗಿ ಸಾಲಮನ್ನಾ ಲೆಕ್ಕ ಚುಕ್ತಾ ಕಾರ್ಯ ವಿಳಂಬವಾಗಿದೆ. ಇದಕ್ಕೆ ಸರಕಾರ ಕಾರಣವಲ್ಲ. ಹೊಸ ಸಾಲ ನೀಡಲು 100 ಕೋಟಿ ರೂ.ಬಿಡುಗಡೆ ಮಾಡಲಾಗಿದೆ ಎಂದರು.

ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ: ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯದಿಂದ ಹರ್ಷಗೊಂಡಿರುವ ಅವರ ಅಭಿಮಾನಿಗಳು, ಪಟಾಕಿ ಸಿಡಿಸಿ ಹಣ ವ್ಯಯ ಮಾಡುವ ಬದಲು, ಆ ಹಣದಲ್ಲಿ ಚಂಡ್ರಕಿ ಗ್ರಾಮದ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗುಗಳನ್ನು ವಿತರಿಸಿದರು. ಸ್ವತಃ ಸಿಎಂ ಮುಖಾಂತರ ಸಾಂಕೇತಿಕವಾಗಿ ಕೆಲವು ಗ್ರಾಮದ ವಿದ್ಯಾರ್ಥಿಗಳಿಗೆ ಬ್ಯಾಗುಗಳನ್ನು ವಿತರಿಸಿದ್ದು ವಿಶೇಷವಾಗಿತ್ತು.

ಜನತಾ ದರ್ಶನಕ್ಕೆ ವರುಣ ಸಿಂಚನ: ಚಂಡ್ರಕಿ ಗ್ರಾಮದಲ್ಲಿ ಸಿಎಂ ಜನತಾ ದರ್ಶನದ ವೇಳೆ ವರಣನ ಸಿಂಚನವಾಯಿತು. ಸಂಜೆ 4.15ರಿಂದ ಪ್ರಾರಂಭವಾದ ಮಳೆಯ ನಡುವೆಯೂ ಸಿಎಂ ಜನತಾದರ್ಶನ ನಿರಾತಂಕವಾಗಿ ನಡೆಯಿತು. ಮಳೆ ಬಂದರೂ ಕಾರ್ಯಕ್ರಮಕ್ಕೆ ಅಡಚಣೆಯಾಗಬಾರದೆಂಬ ಮುನ್ನೆಚ್ಚರಿಕೆಯೊಂದಿಗೆ ಜಿಲ್ಲಾಡಳಿತ ನಿರ್ಮಿಸಿದ್ದ ಸಭಾಂಗಣದಲ್ಲಿ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News