‘ಜನರ ಬಳಿಗೆ ಸರಕಾರ’ ನಮ್ಮ ಗುರಿ: ಡಿ.ಕೆ.ಶಿವಕುಮಾರ್

Update: 2019-06-21 14:24 GMT

ಹುಬ್ಬಳ್ಳಿ, ಜೂ.21: ಆಡಳಿತ ಯಂತ್ರವನ್ನು ಚುರುಕಾಗಿಸಿ ಸರಕಾರದ ಕಾರ್ಯಕ್ರಮಗಳನ್ನು ಜನರ ಬಳಿಗೆ ಕೊಂಡೊಯ್ಯಲು ಅಗತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ಶುಕ್ರವಾರ ಕುಂದಗೋಳದಲ್ಲಿ ನಡೆಸಿದ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತೇನೆ ಎಂದು ಮಾತು ಕೊಟ್ಟಿದ್ದೆ. ಹೆಣ್ಣು ಮಗಳಿಗೆ (ಕುಸುಮಾವತಿ ಶಿವಳ್ಳಿ) ಶಕ್ತಿ ನೀಡಬೇಕು. ಇದಕ್ಕಾಗಿ ಸರಕಾರದ ಆರು ಮಂತ್ರಿಗಳು ಬಂದಿದ್ದೇವೆ. ಇನ್ನು ಮೂವರು ಮಂತ್ರಿಗಳು ಬರಬೇಕಿತ್ತು. ಮುಂದೆ ಅವರೂ ಬರುತ್ತಾರೆ ಎಂದರು.

‘ಇನ್ನು ಮುಂದೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಇಲ್ಲಿಂದಾಚೆಗೆ ಕ್ಷೇತ್ರದ ಆಡಳಿತದಲ್ಲಿ ಬದಲಾವಣೆಗಳು ಕಾಣುತ್ತವೆ. ನಂತರ ಇದೇ ರೀತಿ ಜಿಲ್ಲೆ ಹಾಗೂ ರಾಜ್ಯದಲ್ಲಿಯೂ ಅಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವಂತಾಗುತ್ತದೆ. ಇದು ಜನರ ಸರಕಾರ. ಜನರ ಬಳಿಗೆ ಸರಕಾರ ಹೋಗಬೇಕು. ಇದು ನಮ್ಮ ಮೂಲ ಉದ್ದೇಶ’ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಸೇರಿದಂತೆ ಕೆಲವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲ ಎಂದು ಹೇಳುವುದಿಲ್ಲ. ಕೆಲವರನ್ನು ಇನ್ನೂ ತಿದ್ದಬೇಕಿದೆ. ಅದನ್ನು ಮಾಡಲು ನಾವು ಬಂದಿದ್ದೇವೆ. ಕಾಲಮಿತಿಯೊಳಗೆ ಅಧಿಕಾರಿಗಳು ಕಾರ್ಯಕ್ರಮ ಜಾರಿಗೊಳಿಸಲಿದ್ದಾರೆ. ಕೆಲವು ಅಧಿಕಾರಿಗಳು ಬೇಜವಾಬ್ದಾರಿಯಿಂದ ಇದ್ದಾರೆ. ನಮಗೆ ಕೂಲಿ ಕೊಟ್ಟಿದ್ದಾರೆ. ನಮಗೆ ಅದೇ ಸಾಕು ಎಂಬುದು ಅವರ ಮನೋಭಾವ. ಈ ಕೂಲಿಗಳೆಲ್ಲಾ ನನಗೆ ಬೇಕಾಗಿಲ್ಲ. ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸಿ, ಜಾರಿಗೆ ತರುವವರು ಬೇಕು ಎಂದು ಅವರು ತಿಳಿಸಿದರು.

ವಸತಿ ಸಚಿವರು 10 ಸಾವಿರ ಮನೆಗಳಿಗೆ ಅನುಮತಿ ನೀಡಿದ್ದಾರೆ. ಅವರಿಗೆ ಏನೇನು ಸಹಕಾರ ಬೇಕೋ ಅದನ್ನು ನಾವು ಕೊಡುತ್ತೇವೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಇನ್ನು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಪ್ರತಿಯೊಬ್ಬ ಫಲಾನುಭವಿಗಳ ಮಾಹಿತಿ, ಫೋಟೋ, ಕಾಮಗಾರಿ ಫೋಟೋ ಸೇರಿದಂತೆ ಎಲ್ಲಾ ದಾಖಲೆಗಳನ್ನು ಸರಿಯಾಗಿ ಒದಗಿಸಬೇಕು ಎಂದು ಶಿವಕುಮಾರ್ ಸೂಚಿಸಿದರು.

ಕ್ಷೇತ್ರದಲ್ಲಿ ಪಕ್ಷ, ಜಾತಿ, ಧರ್ಮ ಭೇದ ಇಲ್ಲದೆ ಕ್ಷೇತ್ರದ ಎಲ್ಲ ಮತದಾರರಿಗೂ ಸರಕಾರದ ಒಂದಲ್ಲಾ ಒಂದು ಕಾರ್ಯಕ್ರಮ ಸಿಗಬೇಕು. ಹೀಗಾಗಿ ಕುಂದಗೋಳ ಕ್ಷೇತ್ರದಲ್ಲಿ ಉತ್ತಮ ಆಡಳಿತ ನೀಡಲು ನಿರ್ಧರಿಸಿದ್ದೇವೆ. ನಾವು ನಮ್ಮ ಸಹಾಯಕರಿಗೆ ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡುತ್ತೇವೆ. ಅವರು ಸರಕಾರದ ಕಾರ್ಯಕ್ರಮ ಹೇಗೆ ಜಾರಿಗೊಳಿಸಬೇಕು ಎಂಬುದನ್ನು ನಿರ್ದೇಶನ ನೀಡುತ್ತಾರೆ. ಸರಕಾರದ ಯಾವುದೇ ಯೋಜನೆ ದುರುಪಯೋಗವಾಗಬಾರದು ಎಂದು ಅವರು ಹೇಳಿದರು.

ಇನ್ನು ಆಸ್ಪತ್ರೆ ನಿರ್ಮಾಣ ಸಂಬಂಧ ನಮ್ಮ ತಂಡ ಈಗಾಗಲೇ ಎರಡು ಮೂರು ಜಾಗ ಪರಿಶೀಲನೆ ಮಾಡಿದೆ. ಶಿವಳ್ಳಿಗೆ ಪ್ರಿಯವಾದದ್ದು ಕೂಡ ಆಸ್ಪತ್ರೆಯೇ. ನಾನು ಕೂಡ ಜಾಗ ನೋಡುತ್ತೇನೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಅದರ ನಿರ್ಮಾಣದ ಪ್ರಕ್ರಿಯೆ ಶುರು ಮಾಡುತ್ತೇವೆ. ನಮ್ಮ ಕಚೇರಿ ಇಲ್ಲಿ ಆರಂಭವಾಗುತ್ತದೆ. ಅಲ್ಲಿ ಕುಸುಮಾ ಶಿವಳ್ಳಿ ಅವರಿಗೆ ನಾವು ಸಲಹೆ ಮಾರ್ಗದರ್ಶನ ನೀಡಿ ಶಕ್ತಿ ತುಂಬುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.

ಈ ವಿಚಾರವಾಗಿ ಸಾಕಷ್ಟು ಋಣಾತ್ಮಕ ಪ್ರಶ್ನೆಗಳು ಕೇಳಿ ಬಂದಿವೆ. ಅವುಗಳನ್ನೆಲ್ಲಾ ಬಗೆಹರಿಸುತ್ತೇನೆ. ಯಾರಿಗೆ ಯಾವ ಜವಾಬ್ದಾರಿ ನೀಡಬೇಕು ಎಂದು ತೀರ್ಮಾನಿಸಿ, ಕೆಲಸ ಹಂಚಿಕೆ ಮಾಡುತ್ತೇವೆ. ಇಲ್ಲಿನ ಜನರು ನಮ್ಮನ್ನು ಆರಿಸಿ ಆಶೀರ್ವಾದ ಮಾಡಿ, ಗೌರವ ಉಳಿಸಿದ್ದಾರೆ. ವಿಶ್ವಾಸದಿಂದ ಆಡಳಿತ ನೀಡಿ ಅವರ ಋಣವನ್ನು ತೀರಿಸುತ್ತೇವೆ ಎಂದು ಅವರು ಹೇಳಿದರು.

ಕ್ಷೇತ್ರದಲ್ಲಿ ಮೇವು ಹಾಗೂ ಕುಡಿಯುವ ನೀರಿನ ವಿಚಾರಕ್ಕೆ ಆದ್ಯತೆ ನೀಡಿದ್ದು, ಏನು ಮಾಡಬೇಕು ಎಂಬುದರ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. 200 ಕಿ.ಮೀ ದೂರದಿಂದ ಮೇವು ತರುವುದನ್ನು ಬಿಟ್ಟು, ಇಲ್ಲೇ ಬೆಳೆದು ರೈತರಿಗೆ ಅನುಕೂಲವಾಗುವಂತೆ ಮಾಡಬೇಕು. ಜನರಿಗೂ ಹಣ ಉಳಿಯಬೇಕು. ರೈತನಿಗೂ ತಾನು ಬೆಳೆದ ಮೇವಿಗೆ ಹಣ ಸಿಗಬೇಕು. ಅದಕ್ಕಾಗಿ ಕೆಲವು ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News