×
Ad

ದೇವೇಗೌಡರು ತಲೆಕೆಡಿಸಿಕೊಳ್ಳುವುದು ಬೇಡ, ನಮ್ಮ ಸರಕಾರ ಸುಭದ್ರ: ಸಚಿವ ಡಿಕೆಶಿ

Update: 2019-06-21 19:49 IST

ಹುಬ್ಬಳ್ಳಿ, ಜೂ.21: ಕೊಟ್ಟ ಮಾತಿಗೆ ನಾನಾಗಲಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರಾಗಲಿ ಎಂದಿಗೂ ತಪ್ಪುವುದಿಲ್ಲ. ಹೀಗಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ತಲೆಕೆಡಿಸಿಕೊಳ್ಳುವುದು ಬೇಡ. ನಮ್ಮ ಸರಕಾರ ಸುಭದ್ರವಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ರಾಜ್ಯದಲ್ಲಿ ಮೈತ್ರಿ ಸರಕಾರ ಎಷ್ಟು ದಿನ ಉಳಿಯುತ್ತದೋ ಗೊತ್ತಿಲ್ಲ. ಮಧ್ಯಂತರ ಚುನಾವಣೆ ನಿಶ್ಚಿತ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಶುಕ್ರವಾರ ನಗರದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದರು.

ಕೊಟ್ಟ ಮಾತಿಗೆ ನಮ್ಮ ಪಕ್ಷ ಬದ್ಧ. ನಾನಾಗಲಿ, ರಾಹುಲ್ ಗಾಂಧಿ ಅವರಾಗಲಿ ಮಾತು ತಪ್ಪುವುದಿಲ್ಲ. ದೇವೇಗೌಡರು ಯಾವ ಅರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಈ ಸರಕಾರ ಸುಭದ್ರವಾಗಿರಲಿದೆ. ಈ ಬಗ್ಗೆ ನನಗೆ ನಂಬಿಕೆ ಇದೆ ಎಂದು ಶಿವಕುಮಾರ್ ತಿಳಿಸಿದರು.

ನಮ್ಮ ಪಕ್ಷ ಕುಮಾರಸ್ವಾಮಿ ಅವರನ್ನು ಐದು ವರ್ಷ ಮುಖ್ಯಮಂತ್ರಿಯನ್ನಾಗಿ ಮಾಡಲು ತೀರ್ಮಾನಿಸಿ, ಮೈತ್ರಿ ಮಾಡಿಕೊಂಡಿದೆ. ನಾವು ಅದಕ್ಕೆ ಬದ್ಧವಾಗಿರುತ್ತೇವೆ. ಬಿಜೆಪಿಯವರು ನಮ್ಮ ಸರಕಾರ ತೆಗೆಯಲು ಪಾಪ ಬಹಳ ಪ್ರಯತ್ನ ಪಡುತ್ತಿದ್ದಾರೆ. ಇತ್ತೀಚೆಗೆ ಯಡಿಯೂರಪ್ಪನವರು, ನಾವು ಸರಕಾರ ಬೀಳಿಸಲು ಯಾವುದೇ ಪ್ರಯತ್ನ ಮಾಡುವುದಿಲ್ಲವೆಂದು ಹೇಳಿದ್ದಾರೆ. ಇಷ್ಟು ದಿನ ಸರಕಾರ ಕೆಳಗಿಳಿಸುತ್ತೇವೆ. ಸರಕಾರ ಮುಳುಗಿಹೋಗಿದೆ ಎನ್ನುತ್ತಿದ್ದರು. ಈಗ ನಾವು ಯಾವುದಕ್ಕೂ ಕೈಹಾಕಲ್ಲ ಎಂದಿದ್ದಾರೆ. ಹೀಗಾಗಿ ದೇವೇಗೌಡರು ತಲೆಕೆಡಿಸಿಕೊಳ್ಳಬಾರದು ಎಂದು ಶಿವಕುಮಾರ್ ಹೇಳಿದರು.

ನಮ್ಮ ಪಕ್ಷದ ವಿಚಾರವಾಗಿ ಯಾರೂ ಏನನ್ನೂ ಹೇಳಬಾರದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆದೇಶ ನೀಡಿದ್ದಾರೆ. ಅವರ ಮಾತಿಗೆ ಬೆಲೆ ಕೊಟ್ಟು ನಾನು ಬಾಯಿಗೆ ಬೀಗ ಹಾಕಿಕೊಂಡಿದ್ದೇನೆ. ಪಕ್ಷದ ವಿಚಾರವಾಗಿ ದಿನೇಶ್ ಗುಂಡೂರಾವ್ ಹಾಗೂ ವರಿಷ್ಠರು ಮಾತನಾಡುತ್ತಾರೆ ಎಂದು ಅವರು ತಿಳಿಸಿದರು.

ಸರಕಾರದಲ್ಲಿ ಯಾವ ಅಸಮಾಧಾನವೂ ಇಲ್ಲ. ನಮ್ಮ ಸರಕಾರ ಗಟ್ಟಿಯಾಗಿರುತ್ತದೆ. ಈ ವಿಚಾರವಾಗಿ ನೀವು ತಲೆ ಕೆಡಿಸಿಕೊಳ್ಳಬೇಡಿ, ಬಿಜೆಪಿಯವರೂ ತಲೆ ಕೆಡಿಸಿಕೊಳ್ಳುವುದು ಬೇಡ, ನಾವು ತಲೆಕೆಡೆಸಿಕೊಳ್ಳುವುದಿಲ್ಲ. ಜನರ ಸೇವೆ ಮಾಡಲು ಬಂದಿದ್ದೇವೆ ಅದನ್ನು ಮಾಡೋಣ ಎಂದು ಶಿವಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News