ತುಮಕೂರು: ಸರಗಳ್ಳರ ಬಂಧನ- 9.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ
ತುಮಕೂರು,ಜೂ.21: ನಗರದ ವಿವಿಧಡೆ ನಡೆದ ಹಲವು ಸರಗಳ್ಳತನಗಳಿಗೆ ಸಂಬಂಧಿಸಿದಂತೆ ಏಳು ಜನ ಆರೋಪಿಗಳನ್ನು ಬಂಧಿಸಿರುವ ತಿಲಕ್ ಪಾರ್ಕ್ ಪೊಲೀಸರು, ಬಂಧಿತರಿಂದ 9.50 ಲಕ್ಷ ರೂ. ಬೆಲೆ ಬಾಳುವ 9 ಬಂಗಾರದ ಸರಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದಲ್ಲಿ ಇತ್ತೀಚೆಗೆ ಸರಗಳ್ಳತನ ಹೆಚ್ಚಾಗಿದ್ದು, ನಗರ ಉಪವಿಭಾಗಕ್ಕೆ ಸೇರಿದ ಪೊಲೀಸ್ ಠಾಣಾ ವ್ಯಾಪಿಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ನಗರದ ಹೊರವಲಯದ ಗಂಗಸಂದ್ರ ಬಳಿ ದರೋಡೆ ಮಾಡಲು ಹೊಂಚು ಹಾಕಿ ಕುಳಿತದ್ದ 7 ಜನರ ತಂಡವೊಂದನ್ನು ಬಂಧಿಸಿ ವಿಚಾರಣೆಗೆ ಒಳ ಪಡಿಸಿದಾಗ ನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಸರಗಳವು ಪ್ರಕರಣಗಳು ಬೆಳಕಿಗೆ ಬಂದಿವೆ.
ಪ್ರಕರಣದಲ್ಲಿ ಶಫಿ ಅಹಮದ್(28), ತೌಫಿಕ್ ಅಹಮದ್ (24), ಫೈಸಲ್ ಖಾನ್ (19), ಸಲ್ಮಾನ್ ಖಾನ್ (20), ರಹೀಂ (21), ಮುನ್ನನ್ (22), ಹಾಗೂ ಹನೀಫ್ (26) ಎಂಬುವವರನ್ನು ಬಂಧಿಸಲಾಗಿದೆ. ಇವರಿಂದ ವಿವಿಧ 9 ಸರಗಳವು ಪ್ರಕರಣಗಳಿಗೆ ಬಳಕೆ ಮಾಡಿದ್ದ ದ್ವಿಚಕ್ರ ವಾಹನಗಳು ಹಾಗೂ 315 ಗ್ರಾಂ ತೂಕದ 9 ಸರಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಮತ್ತು ಕಳವು ಮಾಲನ್ನು ಪತ್ತೆ ಹಚ್ಚಲು ಶ್ರಮಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ವಂಸಿ ಕೃಷ್ಣ ಅಭಿನಂದಿಸಿದ್ದಾರೆ.