ಯಾರು ಏನೇ ಹೇಳಿಕೆಗಳು ನೀಡಿದರೂ, ಸಮ್ಮಿಶ್ರ ಸರಕಾರ ಸುಭದ್ರ: ಸಿದ್ದರಾಮಯ್ಯ

Update: 2019-06-21 16:22 GMT

ಹುಬ್ಬಳ್ಳಿ, ಜೂ.21: ಯಾರು ಏನೇ ಹೇಳಿಕೆಗಳನ್ನು ನೀಡಲಿ, ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಸುಭದ್ರವಾಗಿದ್ದು, ತನ್ನ ಅಧಿಕಾರಾವಧಿಯನ್ನು ಪೂರೈಸಲಿದೆ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯಂತರ ಚುನಾವಣೆ ಸಂಬಂಧ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ನೀಡಿರುವ ಹೇಳಿಕೆ ಕುರಿತು ಈಗಾಗಲೇ ಅವರೇ ಸ್ಪಷ್ಟೀಕರಣ ನೀಡಿದ್ದಾರೆ. ನಾನು ಆ ವಿಚಾರದ ಬಗ್ಗೆ ಏನು ಹೇಳುವುದಿಲ್ಲ ಎಂದರು.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೈಸೂರು ಕ್ಷೇತ್ರ ನಮಗೆ ಬೇಕು ಎಂದು ಕೇಳಿದ್ದು ನಿಜ. ತುಮಕೂರು ಕ್ಷೇತ್ರವನ್ನು ಅವರು ಕೇಳಿದ್ದಕ್ಕೆ ಬಿಟ್ಟು ಕೊಟ್ಟೆವು. ಒತ್ತಾಯಪೂರ್ವಕವಾಗಿ ಯಾವ ಕ್ಷೇತ್ರವನ್ನೂ ಯಾರು ಯಾರಿಗೂ ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

 ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ನಾನು ಏನು ಚರ್ಚೆ ಮಾಡಿದ್ದೇನೆ ಅನ್ನೋದನ್ನು ನಾನಾಗಲಿ ಅವರಾಗಲಿ ಹೇಳಿಲ್ಲ. ಆದರೂ, ನೀವು ಊಹೆ ಮಾಡಿಕೊಂಡು ಏನೇನೋ ಬರೆದುಕೊಂಡರೆ, ಅದಕ್ಕೆಲ್ಲ ನಾನು ಉತ್ತರಿಸಿಕೊಂಡು ಕೂರಬೇಕಾ. ಈ ಊಹಾ ಪತ್ರಿಕೋದ್ಯಮ ಬಂದ ಮೇಲೆ ಬಹಳ ಕಷ್ಟವಾಗಿದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಈ ಹಿಂದೆಯೂ ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಈಗಲೂ ಮಾಡುತ್ತಿದ್ದಾರೆ. ಇದರಿಂದ, ಸಮ್ಮಿಶ್ರ ಸರಕಾರಕ್ಕೆ ಲಾಭವಾಗುತ್ತದೆ ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News