ಭೂ ಕಬಳಿಕೆ ಆರೋಪ ಪ್ರಕರಣ: ವಿಚಾರಣೆಗೆ ಹಾಜರಾಗಲು ಶಾಸಕ ಶಿವಲಿಂಗೇಗೌಡಗೆ ಕೋರ್ಟ್ ಆದೇಶ

Update: 2019-06-21 16:38 GMT

ಬೆಂಗಳೂರು, ಜೂ.21: ಭೂ ಕಬಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ವಿಚಾರಣೆಗೆ ಪದೇ ಪದೇ ಗೈರು ಹಾಜರಾಗುತ್ತಿರುವುದಕ್ಕೆ ಭೂ ಕಬಳಿಕೆ ವಿಶೇಷ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಹಾಗೆ ಖುದ್ದು ಜು.27ಕ್ಕೆ ವಿಚಾರಣೆಗೆ ಹಾಜರಾಗಲು ನ್ಯಾಯಾಲಯ ಆದೇಶಿಸಿದೆ.

ದೂರುದಾರರ ಪರ ವಾದಿಸಿದ ಹಿರಿಯ ವಕೀಲ ದೇವರಾಜೇಗೌಡ ಅವರು, ಜನಪ್ರತಿನಿಧಿಯಾಗಿ ಕೊರ್ಟ್‌ಗೆ ಗೌರವ ಸಲ್ಲಿಸಿಲ್ಲ. ಪದೇ ಪದೇ ಗೈರಾಗಿ ನ್ಯಾಯಾಲಯಕ್ಕೆ ಅಪಮಾನ ಮಾಡುತ್ತಿದ್ದಾರೆ. ಇವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲು ಪೀಠಕ್ಕೆ ಮನವಿ ಮಾಡಿದರು. ಶಾಸಕರ ಪರ ವಾದಿಸಿದ ವಕೀಲರು, ಮುಂದಿನ ವಿಚಾರಣೆ ಸಂದರ್ಭದಲ್ಲಿ ಶಾಸಕರು ಕೋರ್ಟ್‌ಗೆ ಹಾಜರಾಗುತ್ತಾರೆ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ವಿಚಾರಣೆಯನ್ನು ಮುಂದೂಡಿತು.

ಪ್ರಕರಣವೇನು: ಅರಸೀಕೆರೆ ಶಾಸಕ ಶಿವಲಿಂಗೇಗೌಡ ವಿರುದ್ಧ ಅರಸೀಕೆರೆ ಪಟ್ಟಣದ ಸರ್ವೇ ನಂಬರ್ 290/2ನಲ್ಲಿ ಸಾರ್ವಜನಿಕ ಸರಕಾರಿ ಪಾರ್ಕ್ ಜಾಗದಲ್ಲಿ ಸ್ವಂತ ಮನೆಯನ್ನು ನಿರ್ಮಾಣ ಮಾಡಿಕೊಂಡಿದ್ದಾರೆ ಎಂದು ಎಚ್.ವೀರಭದ್ರಪ್ಪ 2017ರಲ್ಲಿ ದೂರು ದಾಖಲಿಸಿದ್ದರು. ನಂತರ ಈ ಬಗ್ಗೆ ಕೋರ್ಟ್ ಸಮಗ್ರ ತನಿಖೆ ಮಾಡಲು ಹಾಸನ ಡಿಸಿಗೆ ಸೂಚನೆ ನೀಡಿತ್ತು. ಹಾಸನ ಡಿಸಿ ತನಿಖೆಯಲ್ಲಿ ಅಕ್ರಮ ಪತ್ತೆಯಾಗಿತ್ತು. ಬಳಿಕ ಶಾಸಕ ಶಿವಲಿಂಗೇಗೌಡ ಅವರು ಪ್ರಕರಣ ಸಂಬಂಧ ನ್ಯಾಯಾಲಯದಿಂದ ಜಾಮೀನು ಪಡೆದಿದ್ದರು. ಈ ವೇಳೆ ನ್ಯಾಯಾಲಯದ ತನಿಖೆಗೆ ಸರಿಯಾಗಿ ಹಾಜರಾಗದ ಕಾರಣ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News