×
Ad

ನೀರು ವಿನಿಮಯ: ಮಹಾರಾಷ್ಟ್ರ ಸಚಿವರ ಜತೆ ಚರ್ಚೆಗೂ ಮುನ್ನ ಪರಿಸ್ಥಿತಿ ಅಧ್ಯಯನ- ಡಿ.ಕೆ.ಶಿವಕುಮಾರ್

Update: 2019-06-21 22:11 IST

ಹುಬ್ಬಳ್ಳಿ, ಜೂ.21: ‘ನೀರಿಗೆ ನೀರು’ ಎಂಬ ಶರತ್ತು ಮುಂದಿಟ್ಟಿರುವ ಮಹಾರಾಷ್ಟ್ರ ಸಚಿವರ ಜೊತೆ ಚರ್ಚಿಸುವ ಮೊದಲು ವಸ್ತುಸ್ಥಿತಿಯನ್ನು ನಾಳೆ ತಾವೇ ಖುದ್ದು ಅಧ್ಯಯನ ಮಾಡುವುದಾಗಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಭಯ ರಾಜ್ಯಗಳ ಜಲ ಸಂಪನ್ಮೂಲ ಸಚಿವರು ಚರ್ಚೆ ನಡೆಸಬೇಕು ಎನ್ನುವುದು ಮಹಾರಾಷ್ಟ್ರ ಮುಖ್ಯಮಂತ್ರಿ ಸಲಹೆ. ಜೊತೆಗೆ ಕರ್ನಾಟಕ ಈಗಾಗಲೇ ಕುಡಿಯುವ ಉದ್ದೇಶಕ್ಕೆ ಬಿಡುಗಡೆ ಮಾಡಿರುವ ನೀರು ತಲುಪಿಲ್ಲ ಎನ್ನುವುದು ಅದರ ದೂರು. ಹೀಗಾಗಿ ಖುದ್ದು ಸ್ಥಳ ಪರಿಶೀಲನೆ ನಡೆಸಲು ಬೆಳಗಾವಿ ಗಡಿಭಾಗಗಳಿಗೆ ಭೇಟಿ ನೀಡುತ್ತೇನೆ ಎಂದರು.

ಶನಿವಾರ ಚಿಕ್ಕೋಡಿ ಮಾರ್ಗವಾಗಿ ಸುತ್ತಮುತ್ತಲ ಜಲಾಶಯಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುತ್ತೇನೆ. ಉತ್ತರ ಕರ್ನಾಟಕದ ಜಿಲ್ಲೆಗಳ ಕುಡಿಯುವ ಉದ್ದೇಶಕ್ಕೆ ನೀರು ಬಿಡಲು ಮಹಾರಾಷ್ಟ್ರ ಮುಖ್ಯಮಂತ್ರಿಗಳು ಒಪ್ಪಿದ್ದಾರೆ. ‘ನೀರಿಗೆ ನೀರು’ ವಿನಿಮಯ ಕುರಿತು ಎರಡೂ ರಾಜ್ಯಗಳ ನಡುವೆ ಒಪ್ಪಂದ ಆಗಬೇಕಿದೆ ಎಂದು ಶಿವಕುಮಾರ್ ಹೇಳಿದರು. ಅದಕ್ಕೆ ಮೊದಲು ಉಭಯ ರಾಜ್ಯಗಳ ಜಲಸಂಪನ್ಮೂಲ ಸಚಿವರು ಚರ್ಚಿಸಿ ಎಂದು ಅಲ್ಲಿನ ಮುಖ್ಯಮಂತ್ರಿ ತಿಳಿಸಿದ್ದಾರೆ. ಮಹಾರಾಷ್ಟ್ರ ನೀರಾವರಿ ಸಚಿವರ ಜೊತೆ ಮಾತನಾಡುವ ಮುಂಚಿತವಾಗಿ ರಾಜ್ಯದ ಜಲಾಶಯಗಳ ಪರಿಸ್ಥಿತಿಯನ್ನು ಖುದ್ದಾಗಿ ಅಧ್ಯಯನ ಮಾಡುತ್ತೇನೆ ಎಂದು ಅವರು ತಿಳಿಸಿದರು.

ಇತ್ತೀಚೆಗೆ ಇಳಕಲ್ ಜಲಾಶಯದಿಂದ ಕುಡಿಯುವ ಉದ್ದೇಶಕ್ಕೆ ಮಹಾರಾಷ್ಟ್ರಕ್ಕೆ 2 ಟಿಎಂಸಿ ನೀರು ಬಿಟ್ಟಿದ್ದೆವು. ಆ ನೀರು ಸರಿಯಾಗಿ ತಲುಪಿಲ್ಲ ಎಂದು ಮಾಹಿತಿ ಬಂದಿದ್ದು, ಇದರ ಬಗ್ಗೆ ಖಚಿತ ಮಾಹಿತಿ ಪಡೆದುಕೊಳ್ಳಬೇಕಿದೆ. ಹೀಗಾಗಿ ನಾಳೆ ನಮ್ಮ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರ ತಂಡದ ಜತೆ ನಾನು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತೇನೆ ಎಂದು ಅವರು ಹೇಳಿದರು.

ನಮಗೆ ಎಲ್ಲಿಂದ ನೀರು ಬರಬೇಕು. ನೀರು ಬರಲು ಇರುವ ಸಮಸ್ಯೆ ಏನು? ನಾವು ಎಲ್ಲಿಂದ ನೀರು ಬಿಡಬೇಕಾಗುತ್ತದೆ ಎಂಬುದರ ಬಗ್ಗೆ ಪ್ರತ್ಯಕ್ಷ ಪರಿಶೀಲನೆ ಮಾಡುತ್ತೇನೆ. ಹೀಗಾಗಿ ನಾಳೆ ಬೆಳಗ್ಗೆ ಹುಬ್ಬಳಿಯಿಂದ ಚಿಕ್ಕೋಡಿ ಮಾರ್ಗವಾಗಿ ಗಡಿ ಭಾಗಕ್ಕೆ ಹೋಗುತ್ತೇನೆ. ಸಂಬಂಧಿಸಿದ ಜಿಲ್ಲೆಗಳ ಮುಖಂಡರು, ಅಧಿಕಾರಿಗಳಿಗೆ ಈ ವೇಳೆ ಹಾಜರಿರುವಂತೆ ಪಕ್ಷಾತೀತವಾಗಿ ಆಹ್ವಾನ ನೀಡಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.

ಯಾರಿಗೆ ಆಸಕ್ತಿ ಇದೆಯೋ ಅವರೆಲ್ಲರೂ ಬರಬಹುದು. ಸಂಬಂಧಪಟ್ಟ ಎಲ್ಲ ಶಾಸಕರಿಗೂ ನಮ್ಮ ಅಧಿಕಾರಿಗಳಿಂದ ಆಹ್ವಾನ ನೀಡಲಾಗಿದೆ. ಎರಡು ರಾಜ್ಯಗಳ ನಡುವಣ ಒಪ್ಪಂದ ಆಗಬೇಕಿರುವುದರಿಂದ ಎರಡು ರಾಜ್ಯಗಳ ಹಿತದೃಷ್ಟಿಯನ್ನು ನೋಡಬೇಕಾಗುತ್ತದೆ. ನೀರಿಗೆ ನೀರು ಎನ್ನುತ್ತಿರುವಾಗ ನಮ್ಮ ರೈತರಿಗೂ ಏನೂ ತೊಂದರೆ ಆಗಬಾರದು, ಅವರಿಗೂ ತೊಂದರೆಯಾಗಬಾರದು. ಜಗಳ ಮಾಡಲು ನಮಗೆ ಇಷ್ಟವಿಲ್ಲ. ಹೀಗಾಗಿ ಸೂಕ್ತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಅವರು ಹೇಳಿದರು.

ಕಳೆದ ವರ್ಷ ಈ ಸಮಯಕ್ಕೆ ಕಾವೇರಿ ಜಲಾಶಯದಲ್ಲಿ 48 ಟಿಎಂಸಿ ನೀರು ಸಂಗ್ರಹವಾಗಿತ್ತು. ಈ ಬಾರಿ ಒಂದು ಟಿಎಂಸಿ ನೀರು ಕೂಡ ಒಳಹರಿವು ಬಂದಿಲ್ಲ. ನಿನ್ನೆ ರಾತ್ರಿ ಬಂದ ಮಾಹಿತಿ ಪ್ರಕಾರ ಈ ಭಾಗದಲ್ಲಿ ಮಳೆ ಆರಂಭವಾಗಿದೆ. ಸದ್ಯ ನಮ್ಮನ್ನು ದೇವರೇ ಕಾಪಾಡಬೇಕು ಎಂದು ಅವರು ಪ್ರಾರ್ಥಿಸಿದರು. ವರುಣ ದೇವರು ಕರುಣೆ ತೋರಿಸದಿದ್ದರೆ ಈ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಸಮರ್ಪಕ ನೀರು ಇದ್ದರೆ ನಾವು ಬಿಡುತ್ತೇವೆ. ನಿರೀಕ್ಷೆಯಂತೆ ಮಳೆ ಬಾರದಿದ್ದರೆ ಎರಡೂ ರಾಜ್ಯಗಳ ರೈತರಿಗೆ ಸಂಕಷ್ಟ ಎದುರಾಗಲಿದೆ ಎಂದು ಶಿವಕುಮಾರ್ ಆತಂಕ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News