ಉತ್ತಮ ಸಮಾಜ, ಆರೋಗ್ಯ ಜೀವನಕ್ಕೆ ಎಲ್ಲರೂ ಯೋಗ ಮಾಡಬೇಕಿದೆ: ಸಚಿವ ಜಿ.ಟಿ.ದೇವೇಗೌಡ

Update: 2019-06-21 17:52 GMT

ಮೈಸೂರು,ಜೂ.21: ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ 5ನೇ ಅಂತರಾಷ್ಟ್ರೀಯ ಯೋಗ ದಿನಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಾಲನೆ ದೊರೆಯಿತು. 

ಮೈಸೂರಿನ ರೇಸ್ ಕೋರ್ಸ್ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಯೋಗ ಪ್ರದರ್ಶನಕ್ಕೆ ಡೊಳ್ಳು ಬಾರಿಸುವ ಮೂಲಕ ಸಚಿವ ಜಿ.ಟಿ.ದೇವೇಗೌಡ ಚಾಲನೆ ನೀಡಿದರು.

ನಂತರ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲೂ ಯೋಗವನ್ನು ಕಡ್ಡಾಯಗೊಳಿಸುವ ದಿಸೆಯಲ್ಲಿ ಸರ್ಕಾರ ಚಿಂತನೆ ನಡೆಸುತ್ತಿದೆ. ಪ್ರತಿಯೊಬ್ಬರ ಹಾಗೂ ಕುಟುಂಬದ ಆರೋಗ್ಯದ ದೃಷ್ಟಿಯಿಂದ ಪ್ರತಿಯೊಬ್ಬರೂ ಯೋಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ. ಉತ್ತಮ ಸಮಾಜ ಹಾಗೂ ಆರೋಗ್ಯಯುತ ಜೀವನಕ್ಕೆ ಪ್ರತಿಯೊಬ್ಬರೂ ಯೋಗ ಮಾಡಬೇಕಿದೆ ಎಂದರು.

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮಾತನಾಡಿ, ಇಂದು 180 ರಾಷ್ಟ್ರಗಳು ಯೋಗ ಮಾಡುತ್ತಿವೆ. 6000 ಯೋಗ ಶಿಕ್ಷಕರಿದ್ದಾರೆ. 72000 ನರ ನಾಡಿಗಳ ಚೈತನ್ಯಕ್ಕೆ ಯೋಗ ಮಾಡುತ್ತಿರುವುದು ಸ್ಚಾಗತಾರ್ಹವಾಗಿದೆ ಎಂದು ತಿಳಿಸಿದರು.

ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀನಿರ್ಮಲಾನಂದ ಸ್ವಾಮೀಜಿ, ಶ್ರೀಗಣಪತಿಸಚ್ಚಿದಾನಂದ ಸ್ವಾಮೀಜಿ, ಸರ್ ಖಾಜಿ ಮುಹಮ್ಮದ್ ಉಸ್ಮಾನ್ ಶರೀಫ್ ಸಾಬ್, ಸಚಿವ ಸಾ.ರಾ.ಮಹೇಶ್, ಮೇಯರ್ ಪುಷ್ಪಲತಾ ಜಗನ್ನಾಥ್, ಉಪ ಮೇಯರ್ ಶಫಿ ಅಹಮದ್, ಶಾಸಕರಾದ ರಾಮದಾಸ್, ಡಾ.ಯತೀಂದ್ರ ಸಿದ್ದರಾಮಯ್ಯ, ಎಲ್,ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕಿ ಜ್ಯೋತಿ, ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್, ಪೊಲೀಸ್ ಆಯುಕ್ತ ಬಾಲಕೃಷ್ಣ ಮತ್ತಿತರರು ಯೋಗ ಪ್ರದರ್ಶನದಲ್ಲಿ ಭಾಗಿಯಾಗಿ ವೇದಿಕೆಯ ಮೇಲೆ ಯೋಗ ಪ್ರದರ್ಶಿಸಿದರು. ಸಹಸ್ರಾರು ಮಂದಿ ಯೋಗಪಟುಗಳು ಯೋಗ ಪ್ರದರ್ಶನ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News