ಮಾನಸಿಕ, ದೈಹಿಕ ಆರೋಗ್ಯಕ್ಕೆ ಯೋಗ ಸಹಕಾರಿ: ಚಿಕ್ಕಮಗಳೂರು ಜಿ.ಪಂ ಅಧ್ಯಕ್ಷೆ ಸುಜಾತಾ

Update: 2019-06-21 18:15 GMT

ಚಿಕ್ಕಮಗಳೂರು, ಜೂ.21: ಉತ್ತಮ ಆರೋಗ್ಯಕ್ಕೆ ಯೋಗ ಸಹಕಾರಿಯಾಗುತ್ತದೆ. ಮನುಷ್ಯನ ಶಾರೀಕರಿಕ ಬೆಳವಣಿಗೆ, ಮಾನಸಿಕ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಯೋಗವೇ ಸೂಕ್ತ ಮದ್ದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ವಿಶ್ವ ಯೋಗ ದಿನಾಚರಣೆ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ 5ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವ್ಯಕ್ತಿಯು ದಿನನಿತ್ಯ ಯೋಗಭ್ಯಾಸ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದಲ್ಲಿ ಬದಲಾವಣೆಗಳನ್ನು ಕಂಡುಕೊಳ್ಳುವುದಲ್ಲದೇ ಆರೋಗ್ಯಯುತವಾದ ಜೀವನ ಸಾಗಿಸಲು ಅನುಕೂಲವಾಗುತ್ತದೆ. ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರಾಚೀನ ಕಾಲದಿಂದಲೂ ಭಾರತ ದೇಶ ಯೋಗಭ್ಯಾಸ ಮಾಡಿಕೊಂಡು ಬಂದಿದೆ. ದೇಶದ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿದಿದ್ದು, ಇಂದು ಅಂತರಾಷ್ಟ್ರೀಯ ಮಟ್ಟಕ್ಕೆ ಯೋಗವನ್ನು ಪರಿಚಯಿಸಿ, ಭಾರತ ವಿಶ್ವ ಯೋಗ ದಿನದ ಗುರುವಾಗಿದೆ ಎಂದ ಅವರು, ಜೂನ್ 21ನೇ ದಿನ ಬಂದರೆ ಸಾಕು ವಿಶ್ವವೇ ಭಾರತವನ್ನು ತಿರುಗಿ ನೋಡುತ್ತದೆ. ಇದು ದೇಶದ ಹೆಮ್ಮೆಯ ವಿಚಾರವಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಡಾ.ಕುಮಾರ್ ಮಾತಾನಾಡಿ, ಯೋಗಾಭ್ಯಾಸ ಕೇವಲ ಆಚರಣೆಗೆ ಸೀಮಿತವಾಗಬಾರದು. ಪ್ರತಿದಿನ ಯೋಗಾಭ್ಯಾಸ ಮಾಡಬೇಕು. ಸುಮಾರು ಒಂದು ಗಂಟೆಗಳ ಕಾಲ ದೇಹವನ್ನು ಯೋಗದಲ್ಲಿ ದಂಡಿಸಿದರೆ ಉಳಿದ 23 ಗಂಟೆಗಳ ಕಾಲ ದೇಹವನ್ನು ಆರೋಗ್ಯವಾಗಿಡಲು ಈ ಯೋಗ ಅನುಕೂಲವಾಗುತ್ತದೆ. ವಿಶ್ವಕ್ಕೆ ಯೋಗ ಪರಿಚಯಿಸಿದ ಕೀರ್ತಿ, ಪ್ರಶಂಸೆ ಭಾರತದ್ದಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದ ಅವರು, ಯೋಗ ಮಾಡಬೇಕೆಂದರೆ ಮೊದಲು ಮನಸ್ಸನ್ನು ದೃಢವಾಗಿ ಇಟ್ಟುಕೊಂಡು ನಂತರ ದೇಹ ಬೆಂಡು ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಯೋಗದಲ್ಲಿ ಸಾಧನೆಗೈದ ಇಬ್ಬರು ಯೋಗಪಟುಗಳಾದ ಎಸ್.ಪಿ.ಕೃಪಾ ಮತ್ತು ಶಾಲಿನಿ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾ ಮತ್ತು ರಾಜ್ಯ ಸಂಚಾಲಕ ಚಂದ್ರಶೇಖರ್ ಯೋಗದ ಕುರಿತು ಉಪನ್ಯಾಸ ನೀಡಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೃತಿ, ಜಿ.ಪಂ ಕಾರ್ಯದರ್ಶಿ ರಾಜಗೋಪಾಲ್, ಉಪಕಾರ್ಯದರ್ಶಿ ಪ್ರಕಾಶ್, ಡಿ.ಹೆಚ್.ಓ ಡಾ.ಅಶ್ವತ್ ಬಾಬು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ನಂಜಯ್ಯ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಗೀತಾ.ಎಸ್, ಈಶ್ವರಿ ಬ್ರಹ್ಮಕುಮಾರಿ ಸಮಾಜದ ಬಿ.ಕೆ.ಭಾಗ್ಯ, ಪ್ರಬೋಧಿನಿ ಯೋಗ ಸಂಸ್ಥೆಯ ಅಧ್ಯಕ್ಷ ಸುರೇಂದ್ರ, ಶಿವಪ್ಪ, ಭಾರತ ಸ್ವಾಭಿಮಾನ ಪತಂಜಲಿ ಯೋಗ ಸಮಿತಿ ಜನಕರಾಜ್, ಎಸ್.ಟಿ.ಓ.ಎಸ್.ಎಸ್ ಸಂಸ್ಥೆಯ ಪುಷ್ಪ ಮೋಹನ್, ವಿವಿಧ ಯೋಗ ಸಂಸ್ಥೆಯ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News