ಕಾನೂನು ವ್ಯವಸ್ಥೆಗೆ ಜೀವಾವಧಿ

Update: 2019-06-22 05:24 GMT

ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್‌ಗೆ ನಿರೀಕ್ಷೆಯಂತೆಯೇ ಜೀವಾವಧಿ ಶಿಕ್ಷೆಯಾಗಿದೆ. ಮೂವತ್ತು ವರ್ಷ ಹಳೆಯ ಪ್ರಕರಣವೊಂದನ್ನು ಕೆದಕಿ, ಅದಕ್ಕೆ ಎಲುಬು, ಮಾಂಸ ತುಂಬಿ ಜೀವಕೊಟ್ಟು ಕೊನೆಗೂ ಸಂಜೀವಭಟ್ ಅಪರಾಧಿ ಎಂದು ಘೋಷಿಸುವಲ್ಲಿ ಗುಜರಾತ್ ಸರಕಾರ ಯಶಸ್ವಿಯಾಯಿತು. ಆದರೆ ವಾಸ್ತವದಲ್ಲಿ ಸಂಜೀವ್ ಭಟ್‌ಗೆ ಯಾವ ಅಪರಾಧಕ್ಕಾಗಿ ಈ ಶಿಕ್ಷೆಯನ್ನು ನೀಡಲಾಗಿದೆ ಎನ್ನುವುದು ದೇಶಕ್ಕೆ ಮಾತ್ರವಲ್ಲ, ವಿಶ್ವಕ್ಕೇ ಗೊತ್ತಿದೆ. ಸಾವಿರಾರು ಅಮಾಯಕರ ಹತ್ಯಾಕಾಂಡವನ್ನು ಪ್ರಶ್ನಿಸಿದ ಮಹಾಪರಾಧಕ್ಕಾಗಿಯೇ ಸಂಜೀವ್ ಭಟ್ ಈ ಶಿಕ್ಷೆಗೆ ಅರ್ಹರಾಗಿದ್ದಾರೆ. ಹರೇನ್ ಪಾಂಡೆ ಹತ್ಯೆಯ ರಾಜಕೀಯ ಒಳಗುಟ್ಟುಗಳನ್ನು ಅರಿತಿದ್ದ ಸೊಹ್ರಾಬುದ್ದೀನ್ ಮತ್ತು ಆತನ ಸಂಗಡಿಗರನ್ನು ನಕಲಿಎನ್‌ಕೌಂಟರ್ ಮಾಡಿ ಕೊಂದು ಹಾಕಿದ ಆರೋಪಿಗಳು ಸಾರ್ವಜನಿಕರ ನಡುವೆ ಹೀರೋಗಳಾಗಿ ಮೆರೆಯುತ್ತಿರುವಾಗ, ವಿಶ್ವದ ಮುಂದೆ ಭಾರತವನ್ನು ತಲೆತಗ್ಗಿಸುವಂತೆ ಮಾಡಿದ್ದ ಗುಜರಾತ್ ಹತ್ಯಾಕಾಂಡದ ಸತ್ಯಗಳನ್ನು ಬಹಿರಂಗಪಡಿಸಿದ ಸಂಜೀವ್ ಭಟ್ ಅವರ ಅಧಿಕಾರಾವಧಿಯಲ್ಲಿ ಸಂಭವಿಸಿದೆ ಎನ್ನಲಾದ ಕಸ್ಟಡಿ ಸಾವಿಗಾಗಿ ನ್ಯಾಯಾಲಯ ವಿಲವಿಲನೆ ಒದ್ದಾಡಿ ಆರೋಪಿಗೆ ಶಿಕ್ಷೆ ನೀಡಿದೆ.

ಒಂದು ಮಗುವನ್ನು ಅಮಲು ಪದಾರ್ಥ ನೀಡಿ ದೇವಸ್ಥಾನದೊಳಗೆ ಕೂಡಿ ಹಾಕಿ ಹಲವು ದಿನಗಳ ಕಾಲ ಅತ್ಯಾಚಾರ ಎಸಗಿ ಕೊಂದು ಹಾಕಿದ ಆರೋಪಿಗಳಿಗೆ ನೀಡಿದ ಶಿಕ್ಷೆಗಿಂತಲೂ ಇದು ಕಠಿಣವಾಗಿದೆ. ಸಂಜೀವ್ ಭಟ್ ಅಧಿಕಾರಾವಧಿಯಲ್ಲಿ ಸಂಭವಿಸಿದ ಕಸ್ಟಡಿ ಸಾವಿಗೆ ಶಿಕ್ಷೆ ವಿಧಿಸಲು ನ್ಯಾಯಾಲಯ ತೋರಿದ ಆತುರವನ್ನು ಗಮನಿಸಿದರೆ ಗುಜರಾತ್‌ನಲ್ಲಿ ಕಸ್ಟಡಿ ಸಾವುಗಳೇ ಸಂಭವಿಸಿಲ್ಲವೇನೋ ಎಂದು ಭಾವಿಸಬೇಕು. ಆದರೆ ರಾಷ್ಟ್ರೀಯ ಅಪರಾಧ ದಾಖಲೆ ಮಂಡಳಿಯಿಂದ ಪಡೆದ ಅಂಕಿಅಂಶಗಳ ಪ್ರಕಾರ ಗುಜರಾತ್‌ನಲ್ಲಿ 2001ರಿಂದ 2016ರವರೆಗೆ ಒಟ್ಟು 180 ಕಸ್ಟಡಿ ಸಾವುಗಳು ಸಂಭವಿಸಿವೆ (ಅಂಕಿಅಂಶ ಲಭ್ಯವಿರುವುದೇ ಅಲ್ಲಿಯವರೆಗೆ). ಆದರೆ ಇಂತಹ ಯಾವುದೇ ಪ್ರಕರಣದಲ್ಲಿ ಒಬ್ಬನೇ ಒಬ್ಬ ಪೊಲೀಸ್ ಅಧಿಕಾರಿಗೆ ಶಿಕ್ಷೆಯಾದ ಉದಾಹರಣೆಗಳಿಲ್ಲ. ಅದರಲ್ಲೂ ದೇಶಾದ್ಯಂತ ನಡೆದಿರುವ ಕಸ್ಟಡಿ ಸಾವುಗಳ ಪ್ರಕರಣಗಳು ಇನ್ನೂ ಕೆಟ್ಟದಾಗಿವೆ. ಒಟ್ಟು 1,557 ಕಸ್ಟಡಿ ಸಾವು ಪ್ರಕರಣಗಳಲ್ಲಿ ಕೇವಲ 26 ಆರೋಪಿ ಪೊಲೀಸರಿಗೆ ಶಿಕ್ಷೆಯಾಗಿದೆ. ಇವುಗಳಲ್ಲಿ ಬಹುತೇಕ ಉತ್ತರ ಪ್ರದೇಶದಲ್ಲಿ ನಡೆದಿದೆ.

ಇಷ್ಟಕ್ಕೂ 30 ವರ್ಷಗಳ ಹಿಂದೆ ಸಂಜೀವ್ ಭಟ್ ಅಧಿಕಾರಾವಧಿಯಲ್ಲಿ ಸಂಭವಿಸಿದ ಕಸ್ಟಡಿ ಸಾವಿನ ಹಿನ್ನೆಲೆಯನ್ನು ಗಮನಿಸೋಣ. ಅದು ನವೆಂಬರ್ 1990, ಬಿಜೆಪಿ ಮುಖಂಡ ಎಲ್.ಕೆ. ಅಡ್ವಾಣಿಯವರ ರಥಯಾತ್ರೆಯ ಕೊನೆಯ ದಿನ ಕರೆ ನೀಡಲಾಗಿದ್ದ ಭಾರತ್ ಬಂದ್ ವೇಳೆ ಜಮ್‌ಜೋಧ್‌ಪುರ್‌ನಲ್ಲಿ ದಂಗೆಗಳನ್ನು ನಡೆಸಿದ ಕಾರಣಕ್ಕೆ ಸಂಜೀವ್ ಭಟ್ ಅವರು 100ರಿಂದ 150 ಮಂದಿಯನ್ನು ಬಂಧಿಸಿದ್ದರು. ಹೀಗೆ ಬಂಧಿತರ ಪೈಕಿ ಪ್ರಭುದಾಸ್ ವೈಷ್ಣಾನಿ ಎಂಬ ವ್ಯಕ್ತಿ ಒಂಬತ್ತು ದಿನಗಳ ನಂತರ ಜಾಮೀನು ಪಡೆದು ಹೊರಬಂದಿದ್ದ. ಬಿಡುಗಡೆಯಾದ ಹತ್ತನೇ ದಿನ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಳೆ ಮೃತಪಟ್ಟಿದ್ದ. ಮೃತನ ಸಹೋದರ ಅಮೃತ್‌ಲಾಲ್, ನನ್ನ ಸಹೋದರನಿಗೆ ಪೊಲೀಸ್ ಬಂಧನದಲ್ಲಿ ಚಿತ್ರಹಿಂಸೆ ನೀಡಲಾಗಿದೆ ಎಂದು ಆರೋಪಿಸಿ ಸಂಜೀವ್ ಭಟ್ ಹಾಗೂ ಇತರ ಎಂಟು ಪೊಲೀಸರ ವಿರುದ್ಧ ದೂರು ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆಯನ್ನು ಮ್ಯಾಜಿಸ್ಟ್ರೇಟ್ 1995ರಲ್ಲೇ ಆರಂಭಿಸಿದರೂ ಅದಕ್ಕೆ ಗುಜರಾತ್ ಉಚ್ಚ ನ್ಯಾಯಾಲಯ ತಡೆ ವಿಧಿಸಿತ್ತು. ಈ ತಡೆಯನ್ನು 2011ರಲ್ಲಿ ತೆರವುಗೊಳಿಸಲಾಯಿತು. ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆಯ ಕ್ರಮವೇ ಅನುಮಾನಾಸ್ಪದವಾಗಿದೆ. ಈ ಪ್ರಕರಣದಲ್ಲಿ 300 ಸಾಕ್ಷಿಗಳನ್ನು ಪಟ್ಟಿ ಮಾಡಲಾಗಿದ್ದರೂ ಕೇವಲ 32 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. ಈ ಅಪರಾಧದ ತನಿಖೆ ನಡೆಸುತ್ತಿದ್ದ ತಂಡದ ಭಾಗವಾಗಿದ್ದ ಮೂವರು ಪೊಲೀಸರೂ ಸೇರಿದಂತೆ ಹಲವು ಪ್ರಮುಖ ಸಾಕ್ಷಿಗಳನ್ನು ಕೈಬಿಡಲಾಗಿದೆ ಎಂದು ಭಟ್ ಸುಪ್ರೀಂ ಕೋರ್ಟ್‌ಗೆ ಮಾಡಿದ ಮನವಿಯಲ್ಲಿ ತಿಳಿಸಿದ್ದರು.

ಈ ಪ್ರಕರಣದಲ್ಲಿ ಹೆಚ್ಚುವರಿ 11 ಸಾಕ್ಷಿಗಳ ವಿಚಾರಣೆ ನಡೆಸಬೇಕೆಂದು ಭಟ್ ಮಾಡಿದ ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ಒಂದು ವಾರದ ಹಿಂದೆ ತಳ್ಳಿಹಾಕಿತ್ತು. ಮಾನವ ಹಕ್ಕುಗಳ ನಿಗಾ ಸಂಸ್ಥೆ 2016ರಲ್ಲಿ ಬಿಡುಗಡೆ ಮಾಡಿದ ವರದಿಯ ಪ್ರಕಾರ 2010ರಿಂದ 2015ರ ಮಧ್ಯೆ ಭಾರತದಲ್ಲಿ 519 ಕಸ್ಟಡಿ ಸಾವುಗಳು ಸಂಭವಿಸಿವೆ. ಬಂಧನದ ಸಮಯದಲ್ಲಿ ಸರಿಯಾದ ಪ್ರಕ್ರಿಯೆ ಅನುಸರಿಸಲು ಪೊಲೀಸರು ನಿರ್ಲಕ್ಷ ತೋರುತ್ತಾರೆ ಮತ್ತು ಕಸ್ಟಡಿಯಲ್ಲಿ ಸಂಭವಿಸುವ ಸಾವುಗಳಿಗೆ ಆತ್ಮಹತ್ಯೆ, ಅನಾರೋಗ್ಯ ಅಥವಾ ಸ್ವಾಭಾವಿಕ ಕಾರಣ ನೀಡಲು ವ್ಯವಸ್ಥೆ ಅವರಿಗೆ ಅಧಿಕಾರ ನೀಡುವ ಮೂಲಕ ಅವರ ಧೈರ್ಯ ಮತ್ತಷ್ಟು ಹೆಚ್ಚುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಸಂಜೀವ್ ಭಟ್ ಆರೋಪಿಯಾಗಿರುವ ಪ್ರಕರಣ ನಡೆದ ವರ್ಷದಲ್ಲಿ ಎಷ್ಟು ಕಸ್ಟಡಿ ಸಾವುಗಳು ಸಂಭವಿಸಿವೆ ಎಂಬ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಆ್ಯಮ್ನೆಸ್ಟಿ ಅಂತರ್‌ರಾಷ್ಟ್ರೀಯದ 1992ರ ವರದಿಯಂತೆ, 1985 ಮತ್ತು 1991ರ ಮಧ್ಯೆ ಭಾರತದಲ್ಲಿ 415 ಕಸ್ಟಡಿ ಸಾವುಗಳು ಸಂಭವಿಸಿದ್ದವು. ಈ ಪೈಕಿ ಕೇವಲ ಎರಡು ಪ್ರಕರಣಗಳಲ್ಲಿ ತಪ್ಪಿತಸ್ಥ ಪೊಲೀಸರಿಗೆ ಶಿಕ್ಷೆಯಾಗಿತ್ತು.

1986ರಲ್ಲಿ ಬುಡಕಟ್ಟು ಜನಾಂಗದ ಮಹಿಳೆಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಸರ್ವೋಚ್ಚ ನ್ಯಾಯಾಲಯದ ಸಮಿತಿ ನಾಲ್ಕು ಪೊಲೀಸ್ ಅಧಿಕಾರಿಗಳು ಮತ್ತು ಇಬ್ಬರು ವೈದ್ಯರ ವಿರುದ್ಧ, ಸಾಕ್ಷಿಗಳನ್ನು ನಾಶ ಮಾಡುವ ಮೂಲಕ ಆರೋಪಿ ಪೇದೆಯನ್ನು ಶಿಕ್ಷೆಯಿಂದ ಪಾರು ಮಾಡಲು ಸಂಚು ರೂಪಿಸಿರುವ ಬಗ್ಗೆ ಸಾಕಷ್ಟು ಪುರಾವೆ ಲಭ್ಯವಾಗಿದೆ ಎಂದು ತಿಳಿಸಿತ್ತು. ಖಂಡಿತವಾಗಿಯೂ, ಆ್ಯಮ್ನೆಸ್ಟಿ ವರದಿಯಲ್ಲಿ ತಿಳಿಸಿರುವಂತೆ, ಕಸ್ಟಡಿ ಚಿತ್ರಹಿಂಸೆ ಅಥವಾ ಸಾವು ಪ್ರಕರಣಗಳಲ್ಲಿ ಪೊಲೀಸರನ್ನು ಬೆಂಬಲಿಸಬೇಕೆಂದು ಸರಕಾರಗಳ ಅಲಿಖಿತ ನಿಯಮವಾಗಿದೆ. ಹಾಗಾದರೆ ಈ ಅಲಿಖಿತ ನಿಯಮ ಸಂಜೀವ್ ಭಟ್ ಪ್ರಕರಣದಲ್ಲಿ ಯಾಕೆ ಪಾಲಿಸಲಾಗಿಲ್ಲ? ಉತ್ತರ ಸ್ಪಷ್ಟ. ಮುಖ್ಯವಾಗಿ ಗುಜರಾತ್ ದಂಗೆಯ ವಿರುದ್ಧ ಭಟ್ ಧ್ವನಿಯೆತ್ತಿದ ದಿನದಿಂದ ಸರಕಾರದಿಂದ ಕಿರುಕುಳಗಳು ಆರಂಭವಾದವು. 2011ರಲ್ಲಿ ಭಟ್ ‘ತಾನು 2002ರ ಗುಜರಾತ್ ದಂಗೆಗಳ ಹಿನ್ನೆಲೆಯಲ್ಲಿ ಸಭೆಯಲ್ಲಿ ಭಾಗಿಯಾಗಿದ್ದೆ.ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ, ಗೋಧ್ರಾ ರೈಲು ಹತ್ಯಾಕಾಂಡದ ನಂತರ ಮುಸ್ಲಿಮರ ಮೇಲಿರುವ ಆಕ್ರೋಶವನ್ನು ಹೊರಹಾಕಲು ಹಿಂದೂಗಳಿಗೆ ಅವಕಾಶ ನೀಡಿ ಎಂದು ಹಿರಿಯ ಐಪಿಎಸ್ ಅಧಿಕಾರಿಗಳಿಗೆ ಸೂಚಿಸಿದ್ದರು’ ಎಂದು ಆರೋಪಿಸಿದ್ದರು.

ದಂಗೆಯಲ್ಲಿ ಸರಕಾರದ ನೇರಪಾತ್ರವನ್ನು ಎತ್ತಿ ಹಿಡಿಯುವ ಹಲವು ಮಹತ್ವದ ಸಾಕ್ಷಗಳನ್ನು ಅವರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದರು. ಆ ಸತ್ಯಕ್ಕಾಗಿ ಭಟ್ ತೆತ್ತ ಬೆಲೆ ಜೀವಾವಧಿ ಶಿಕ್ಷೆ. ಬಹುಶಃ ಸರಕಾರದ ಜೊತೆ ನಿಂತು ದಂಗೆಯಲ್ಲಿ ಅಮಾಯಕರನ್ನು ಗುಂಡಿಟ್ಟು ಕೊಂದಿದ್ದರೂ ಅವರಿಗೆ ಈ ಸ್ಥಿತಿ ಬರುತ್ತಿರಲಿಲ್ಲ. ಇಂದು ಅದಾವುದೋ ಉನ್ನತ ಹುದ್ದೆಯಲ್ಲಿ ಅವರು ಕಂಗೊಳಿಸುತ್ತಿದ್ದರೇನೋ. ಒಟ್ಟಿನಲ್ಲಿ ಭಟ್ ಅವರಿಗಾಗಿರುವ ಅನ್ಯಾಯ ಪೊಲೀಸ್ ಅಧಿಕಾರಿಗಳ ನೈತಿಕ ಸ್ಥೈರ್ಯವನ್ನು ಕುಗ್ಗಿಸಿದೆ. ಸತ್ಯ, ನ್ಯಾಯದ ಪರವಾಗಿ ನಿಲ್ಲುವ ಯಾವುದೇ ಅಧಿಕಾರಿಗಳ ಸ್ಥಿತಿ ಏನಾಗಬಹುದು ಎನ್ನುವುದನ್ನು ವ್ಯವಸ್ಥೆ ಭಟ್ ಮೂಲಕ ಎಚ್ಚರಿಕೆ ನೀಡಿದೆ. ಜೈಲಲ್ಲಿರಬೇಕಾದವರು ಬೀದಿಗಳಲ್ಲಿ ದೇಶಪ್ರೇಮದ ಘೋಷಣೆಗಳನ್ನು ಕೂಗುತ್ತಾ ಅಮಾಯಕರನ್ನು ಕೊಲ್ಲುತ್ತಿರುವ ದಿನಗಳಲ್ಲಿ ಅದನ್ನು ತಡೆಯಬೇಕಾದ ಕಾನೂನುವ್ಯವಸ್ಥೆ ಜೀವಾವಧಿ ಶಿಕ್ಷೆಗೊಳಗಾಗಿದೆ. ಜೊತೆಗೆ ದೇಶದಲ್ಲಿ ಇನ್ನಷ್ಟು ದಂಗೆಗಳನ್ನು ಎಬ್ಬಿಸಲು ಜನರಿಗೆ ಪರವಾನಿಗೆ ನೀಡಿದಂತಾಗಿದೆ. ನ್ಯಾಯವೇ ಅನ್ಯಾಯವಾದರೆ ದೇಶವನ್ನು ಕಾಪಾಡುವವರು ಯಾರು?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News