ಮದುವೆಗೆ ಕುಟುಂಬಸ್ಥರ ವಿರೋಧ: ವಿಷ ಸೇವಿಸಿ ಪ್ರೇಮಿಗಳು ಆತ್ಮಹತ್ಯೆ
ಚಾಮರಾಜನಗರ, ಜೂ.22: ಮದುವೆಗೆ ಕುಟುಂಬದವರು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದ ಬಳಿ ನಡೆದಿದೆ.
ಕೊಳ್ಳೇಗಾಲ ತಾಲೂಕಿನ ಉಗನೀಯ ಗ್ರಾಮದ ಕಿರಣ್ (23) ಮತ್ತು ಸಂಗೀತಾ (17) ಎಂಬವರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು.
ಕಳೆದ ಮೂರು ದಿನಗಳ ಹಿಂದೆ ಇಲ್ಲಿಗೆ ಆಗಮಿಸಿದ್ದ ಕಿರಣ್ ಹಾಗೂ ಸಂಗೀತಾ ಸತ್ತೇಗಾಲದ ಸಮೀಪದ ಗವಿರಾಯಸ್ವಾಮಿ ದೇವಸ್ಥಾನದ ಬಳಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮದುವೆಗೆ ಮನೆಯವರು ಅಡ್ಡಿ ಪಡಿಸುತ್ತಿರುವುದೇ ಕೃತ್ಯಕ್ಕೆ ಕಾರಣ ಎಂದು ತಿಳಿದುಬಂದಿದೆ. ಮೃತ ದೇಹಗಳ ಸಮೀಪದಲ್ಲೇ ವಿಷದ ಬಾಟಲ್, ಮೊಬೈಲ್ ಮತ್ತು ಸಂಗೀತಾಳ ವೇಲ್ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಕೊಳ್ಳೇಗಾಲ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಕಾಂತ್, ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ವನರಾಜು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತ ದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು.