×
Ad

‘ಗೌಡ’ ಜಾತಿಯವನಾದುದರಿಂದ ಸಚಿವ, ಮುಖ್ಯಮಂತ್ರಿಯಾದೆ: ಕೇಂದ್ರ ಸಚಿವ ಸದಾನಂದ ಗೌಡ

Update: 2019-06-22 19:48 IST

ಬೆಂಗಳೂರು, ಜೂ.22: ನನ್ನ ಹೆಸರಿನ ಮುಂದೆ ‘ಗೌಡ’ ಎಂದು ಹೆಸರಿದ್ದುದರಿಂದಲೇ ಮುಖ್ಯಮಂತ್ರಿ, ಕೇಂದ್ರ ಸರಕಾರದಲ್ಲಿ ಮಂತ್ರಿಯಾಗಲು ಸಾಧ್ಯವಾಗಿದೆ. ಇದನ್ನು ಹೇಳಿಕೊಳ್ಳಲು ಯಾವುದೇ ಹಿಂಜರಿಕೆಯಿಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ. 

ಶನಿವಾರ ನಗರದ ಕಸಾಪದಲ್ಲಿ ಭಾರತ ಜ್ಞಾನಾಭಿವೃದ್ಧಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಹಾಗೂ ಕೆಂಪೇಗೌಡ ಯಲಹಂಕ ಸಂಸ್ಥಾನದ ಇತಿಹಾಸ ಮತ್ತು ಐತಿಹ್ಯದ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಮ್ಮ ಸಮುದಾಯದ ಬಗ್ಗೆ ಹೇಳಲು ಹಿಂಜರಿಕೆಯಿಲ್ಲ. ಇಂದು ನಾನು ಎಲ್ಲ ಸ್ಥಾನಗಳನ್ನು ಏರಲು ಸಾಧ್ಯವಾಗಿದೆ. ಅದಕ್ಕೆ ನನ್ನ ರಕ್ತದಲ್ಲಿ ಸೇರಿಕೊಂಡಿರುವ ನಮ್ಮ ಸಮುದಾಯ ಕಾರಣವಾಗಿದೆ ಎಂದ ಅವರು, ಸುಳ್ಯದಲ್ಲಿ ನನ್ನನ್ನು ಡಿ.ವಿ.ಸದಾನಂದ ಎಂದೇ ಕರೆಯುತ್ತಿದ್ದರು. ಅಲ್ಲದೆ, ಎಲ್ಲ ಸರ್ಟಿಫಿಕೇಟ್‌ಗಳಲ್ಲೂ ಸದಾನಂದ ಎಂದಿದೆ. ಆದರೆ, ರಾಷ್ಟ್ರದಲ್ಲಿ ಬಿಜೆಪಿ ಹುಟ್ಟುಹಾಕಿದ ಸಂದರ್ಭದಲ್ಲಿ ವಾಜಪೇಯಿಯ ಪ್ರಭಾವದಿಂದ ಅಂದಿನ ಎಬಿವಿಪಿಗೆ ರಾಜೀನಾಮೆ ನೀಡಿ ಸುಳ್ಯದಲ್ಲಿ ಬಿಜೆಪಿ ಅಧ್ಯಕ್ಷನಾಗಿ ಆಯ್ಕೆಯಾದೆ ಎಂದರು.

ಮನುಷ್ಯನ ವ್ಯವಸ್ಥೆಗೆ ಹಾಗೂ ಆರೋಗ್ಯಕ್ಕೆ ಪೂರಕ ವಾತಾವರಣ ಮಾಡಿಕೊಟ್ಟಿದ್ದು ಕೆಂಪೇಗೌಡ. ಕಳೆದ ಐನೂರು ವರ್ಷಗಳ ಹಿಂದೆಯೇ ಬೆಂಗಳೂರು ನಿರ್ಮಾರ್ತೃ ಕೆಂಪೇಗೌಡ ಸ್ಮಾರ್ಟ್ ಸಿಟಿಯ ಕಲ್ಪನೆಯನ್ನಿಟ್ಟಿದ್ದಾರೆ. ಅವರು ಜಗತ್ತಿನ ಪರಿಕಲ್ಪನೆಯ ಕನಸು ಕಂಡಿದ್ದರು. ಕೆಂಪೇಗೌಡರು ಪ್ರತಿಪಾದಿಸಿದ ವಿಷಯಗಳಿಂದು ಪುಸ್ತಕ, ಅಧ್ಯಯನದಲ್ಲಿ ಬರಬೇಕು. ಕೆಂಪೇಗೌಡ ಕೇವಲ ಆಡಳಿತ ಮಾಡಲಿಲ್ಲ, ಜನರಿಗಾಗಿ ಕುಟುಂಬವನ್ನೇ ಅರ್ಪಿಸಿದ್ದಾರೆ ಎಂದು ನುಡಿದರು.

ಬೆಂಗಳೂರುನಲ್ಲಿ ಹುಟ್ಟಿ, ಬದುಕುವವರು ಕೆಂಪೇಗೌಡರನ್ನು ನೆನೆಯದಿದ್ದರೆ ಬದುಕು ವ್ಯರ್ಥ ಎಂದ ಸದಾನಂದಗೌಡರು, ಹಿಂದಿನ ಕಾಲದಲ್ಲಿ ಜನರ ಮನಸ್ಸು ಬಂಗಾರವಾಗಿತ್ತು. ಆದರೆ, ಈಗ ಬಂಗಾರದ ಮನಸ್ಸು ಇಟ್ಟುಕೊಳ್ಳಲು ಸಮಾಜ ಬಿಡುತ್ತಿಲ್ಲ. ಇತಿಹಾಸ ಎಂಬುದು ಸಿಂಹದ ನಡುಗೆ ಇದ್ದಂತೆ. ಅದರ ಪ್ರತಿಯೊಂದು ಹೆಜ್ಜೆಯಲ್ಲಿರುವ ಭಾವನೆಗಳು ಗಂಭೀರವಾಗಿರುತ್ತದೆ. ಹಾಗೆ ನಾವು ಭವಿಷ್ಯ ನಿರ್ಮಾಣ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಸಾಹಿತಿ ತಲಕಾಡು ಚಿಕ್ಕರಂಗೇಗೌಡ ಮಾತನಾಡಿ, ಕೆಂಪೇಗೌಡ ಹಾಗೂ ಅವರ ತಂದೆಯ ಸಮಾಧಿಗಳಿವೆ. ಕೆಂಪೇಗೌಡ ರಾಜರ ಬಗ್ಗೆ ಅಧ್ಯಯನ ಮಾಡಲು ಬೆಂಗಳೂರಿನಿಂದ ಹೊರಗಡೆ ಹೋಗಬೇಕು. ಅಲ್ಲಿ ಅವರ ಸಮಕಾಲೀನ ಸಾಹಿತ್ಯ, ಗುಡಿ ಗೋಪುರಗಳು ಸಿಕ್ಕಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ ಕೆಂಪೇಗೌಡ ರಾಜವಂಶ ಚರಿತೆ ಹಾಗೂ ಬೆಂಗಳೂರು ಕೆಂಪೇಗೌಡ ಕೃತಿ ಲೋಕಾರ್ಪಣೆ ಮಾಡಿದರು. ಆದಾಯ ತೆರಿಗೆ ಆಯುಕ್ತ ಜಯರಾಂ ರಾಯಪುರ, ರಾಜ್ಯ ಪ್ರಾಚ್ಯವಸ್ತು ಸಂಗ್ರಹಾಲಯದ ನಿರ್ದೇಶಕ ಡಾ.ಆರ್.ಗೋಪಾಲ್, ಪ್ರೊ.ಬಿ.ಜಯ ಪ್ರಕಾಶ್ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಗೌಡ ಎಂದು ಸೇರಿಸಿದ ಬಳಿಕ ಗೆದ್ದೆ
ಪುತ್ತೂರಿನಲ್ಲಿ ನಮ್ಮ ಅಭ್ಯರ್ಥಿಗಳು ಎಲ್ಲರೂ ಸೋತು ಹೋದರು. ಆ ಸಂದರ್ಭದಲ್ಲಿ ಅನಿವಾರ್ಯವಾಗಿ ನಾನು ಡಿ.ವಿ.ಸದಾನಂದ ಎಂಬ ಹೆಸರಿನಿಂದಲೇ ಚುನಾವಣೆಗೆ ಸ್ಪರ್ಧಿಸಿ, 1 ಸಾವಿರ ಮತಗಳ ಅಂತರದಿಂದ ಸೋತಿದ್ದೆ. ಬಳಿಕ ನನ್ನ ಆತ್ಮೀಯರೊಬ್ಬರು ನೀನು ನಿನ್ನ ಹೆಸರಿನ ಮುಂದೆ ಗೌಡ ಸೇರಿಸಿಕೊ ಎಂದು ಸಲಹೆ ನೀಡಿದ್ದರು. ಅವರ ಸಲಹೆಯಂತೆ ಗೌಡ ಸೇರಿಸಿಕೊಂಡೆ. ಅನಂತರ ರಾಜ್ಯದಲ್ಲಿ ಮುಖ್ಯಮಂತ್ರಿಯಾದೆ, ಕೇಂದ್ರದಲ್ಲಿ ಮಂತ್ರಿಯಾಗುವ ಅವಕಾಶವೂ ಸಿಕ್ಕಿತು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News