ಗ್ರಾಮ ವಾಸ್ತವ್ಯದ ಬಗ್ಗೆ ಬಿಎಸ್‌ವೈ ಟೀಕೆಗೆ ಸಿಎಂ ಎಚ್‌ಡಿಕೆ ತಿರುಗೇಟು
Update: 2019-06-22 19:54 IST
ಬೆಂಗಳೂರು, ಜೂ. 22: ‘ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ಉತ್ತರ’ ಎಂಬ ರಾಷ್ಟ್ರಕವಿ ಕುವೆಂಪು ಅವರನ್ನು ಉಲ್ಲೇಖಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ತಮ್ಮ ಗ್ರಾಮ ವಾಸ್ತವ್ಯ ಕುರಿತ ವಿರೋಧ ಪಕ್ಷದ ನಾಯಕ ಯಡಿಯೂರಪ್ಪನವರ ಹುರುಳಿಲ್ಲದ ಟೀಕೆಗೆ ಇದೇ ನನ್ನ ಉತ್ತರ ಎಂದು ತಿರುಗೇಟು ನೀಡಿದ್ದಾರೆ.
‘ಸರಕಾರ ಬರ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದೆ. ನಾನು ನಿನ್ನೆ ಗ್ರಾಮ ವಾಸ್ತವ್ಯ ಮಾಡಿರುವುದು ಸಹ ಬರಪೀಡಿತ ಯಾದಗಿರಿ ಜಿಲ್ಲೆಯಲ್ಲೇ ಎಂದು ಬಿಜೆಪಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟರ್ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.
ಗ್ರಾಮ ವಾಸ್ತವ್ಯದ ಮೂಲಕ ಜನರ ಸಂಕಷ್ಟಗಳನ್ನು ಸಹ ಅರಿತಿದ್ದೇನೆ, ಅದಕ್ಕೆ ಪರಿಹಾರವನ್ನೂ ಒದಗಿಸಲಾಗುತ್ತಿದೆ. ಪ್ರತಿಪಕ್ಷದ ನಾಯಕರು ಒಂದೆಡೆ ಅಧಿಕಾರಿಗಳ ಬೆನ್ನುತಟ್ಟಿ, ಮಾಧ್ಯಮಗಳ ಮುಂದೆ ಭಿನ್ನ ರಾಗ ಹಾಡುವುದು ಅವರ ದ್ವಂದ್ವ ನೀತಿಯನ್ನು ಬಿಂಬಿಸುತ್ತದೆ ಎಂದು ಕುಮಾರಸ್ವಾಮಿ ಮತ್ತೊಂದು ಟ್ವಿಟ್‌ನಲ್ಲಿ ಟೀಕಿಸಿದ್ದಾರೆ.