ಮೈತ್ರಿ ಪಕ್ಷಗಳಲ್ಲಿ ಹೊಂದಾಣಿಕೆ ಮುಖ್ಯ: ಎಚ್.ಡಿ.ದೇವೇಗೌಡ

Update: 2019-06-22 16:36 GMT

ಬೆಂಗಳೂರು, ಜೂ.22: ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಹೋದರೆ, ಮುಂದಿನ ನಾಲ್ಕು ವರ್ಷದ ಬಳಿಕ ವಿಧಾನಸಭೆಗೆ ಚುನಾವಣೆ ಎದುರಾಗುತ್ತದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ಶನಿವಾರ ನಗರದ ಜೆಡಿಎಸ್ ಕಚೇರಿ(ಜೆ.ಪಿ.ಭವನ)ಯಲ್ಲಿ ಆಯೋಜಿಸಲಾಗಿದ್ದ ಪಕ್ಷದ ಮಹಿಳಾ ಕಾರ್ಯಕರ್ತೆಯರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಾಲ್ಕು ವರ್ಷಗಳಲ್ಲಿ ಪಕ್ಷದ ಸಂಘಟನೆ ಆಗಬೇಕು ಎಂದರು.

ಕುಮಾರಸ್ವಾಮಿ ಸರಕಾರ ನಡೆಸುತ್ತಾರೆ. ನಾನು ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನು ಉಳಿಸಿ, ಬೆಳೆಸುವ ಕೆಲಸ ಮಾಡುತ್ತೇನೆ. ನನ್ನ ರಾಜಕೀಯ ಜೀವನದಲ್ಲಿ ಅನೇಕ ಏಳುಬೀಳುಗಳನ್ನು ನೋಡಿದ್ದೇನೆ. ಯಾವುದೇ ಕಾರಣಕ್ಕೂ ಕುಗ್ಗುವುದಿಲ್ಲ. ಪಕ್ಷ ಸಂಘಟನೆಯನ್ನು ಮಾಡಲು ಶ್ರಮಿಸುತ್ತೇನೆ ಎಂದು ದೇವೇಗೌಡ ಹೇಳಿದರು.

ಹೆಣ್ಣು ಮಕ್ಕಳಿಗೆ ರಾಜಕೀಯವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ. ದೇಶದಲ್ಲಿ ಶೇ.51ರಷ್ಟು ಮಹಿಳೆಯರಿದ್ದು, ಅವರಿಗೆ ರಾಜಕೀಯ ಮೀಸಲಾತಿ ಕಲ್ಪಿಸುವ ಅಗತ್ಯವಿದೆ. ಆದರೆ, ಪ್ರಧಾನಿ ನರೇಂದ್ರಮೋದಿ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತರಲು ಆಸಕ್ತಿ ವಹಿಸುತ್ತಿಲ್ಲ ಎಂದು ಅವರು ದೂರಿದರು.

ಈ ಹಿಂದೆ ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಪ್ರಧಾನಿಯಾಗಿದ್ದ ಡಾ.ಮನಮೋಹನ್ ಸಿಂಗ್, ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಆಸಕ್ತಿ ತೋರಿದ್ದರು. ಈ ವಿಚಾರವನ್ನು ಮತ್ತೆ ನರೇಂದ್ರಮೋದಿಗೆ ನೆನಪಿಸಬೇಕಿತ್ತು. ಆದರೆ, ನಾನು ಚುನಾವಣೆಯಲ್ಲಿ ಸೋತಿದ್ದೇನೆ ಎಂದು ದೇವೇಗೌಡ ಬೇಸರ ವ್ಯಕ್ತಪಡಿಸಿದರು.

ನನ್ನ ಅಧಿಕಾರಾವಧಿಯಲ್ಲಿ ಶಿಕ್ಷಕ ವರ್ಗಕ್ಕೆ ಶೇ.50 ಮೀಸಲಾತಿ ಕೊಟ್ಟಿದ್ದೆ. ರಾಜ್ಯದಲ್ಲಿ ಪೊಲೀಸ್ ಇಲಾಖೆಯಲ್ಲೂ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿಕೊಟ್ಟೆ. ಮೀಸಲಾತಿ ಕಾರಣದಿಂದ ಮಹಾನಗರ ಪಾಲಿಕೆಗಳಲ್ಲಿ ಮಹಿಳೆಯರು ಮೇಯರ್ ಆಗಿ ಆಯ್ಕೆಯಾಗುತ್ತಿದ್ದಾರೆ ಎಂದು ಅವರು ಹೇಳಿದರು.

ಜಿಲ್ಲಾ ಘಟಕಗಳನ್ನು ರಚಿಸಿ, ಅಧ್ಯಕ್ಷರು, ಕಾರ್ಯಾಧ್ಯಕ್ಷರನ್ನು ನೇಮಕ ಮಾಡಲಾಗುವುದು. ನಿಮ್ಮ ಆಯ್ಕೆ ಯಾರು ಎಂಬುದನ್ನು ನಿರ್ಧರಿಸಿ. ಇಂದಿನಿಂದ ಹೊಸ ಅಧ್ಯಾಯ ಪ್ರಾರಂಭ ಮಾಡೋಣ. ಈ ಸಭೆಯಲ್ಲಿ ಯಾವ ಯಾವ ಕಾರ್ಯಕರ್ತೆಯರು ಮಾತನಾಡುತ್ತೀರೋ ಮಾತನಾಡಿ, ನಿಮ್ಮ ಅಭಿಪ್ರಾಯ, ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ ಎಲ್ಲವನ್ನೂ ನಾನು ಕೇಳುತ್ತೇನೆ ಎಂದು ಅವರು ಹೇಳಿದರು.

ಸಮಾವೇಶದಲ್ಲಿ ಅಧ್ಯಕ್ಷರ ಘೋಷಣೆ

ಮುಂದಿನ ತಿಂಗಳು 50 ಸಾವಿರ ಹೆಣ್ಣು ಮಕ್ಕಳನ್ನು ಸೇರಿಸಿ ಮಹಿಳಾ ಕಾರ್ಯಕರ್ತೆಯರ ಸಮಾವೇಶ ಮಾಡಲಾಗುವುದು. ಇವತ್ತಿನ ಸಭೆಯಲ್ಲಿ ಮಹಿಳಾ ಘಟಕದ ರಾಜ್ಯಾಧ್ಯಕ್ಷ ಆಯ್ಕೆ ಸಂಬಂಧ ಚರ್ಚೆಯಾಗಿದೆ. ಮಹಿಳಾ ಕಾರ್ಯಕರ್ತೆಯರ ಸಮಾವೇಶದಲ್ಲಿ ರಾಜ್ಯಾಧ್ಯಕ್ಷರ ಹೆಸರು ಘೋಷಿಸಲಾಗುವುದು.

-ಎಚ್.ಡಿ.ದೇವೇಗೌಡ, ಜೆಡಿಎಸ್ ವರಿಷ್ಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News