ತ್ರಿಭಾಷಾ ಸೂತ್ರ ಪ್ರಾದೇಶಿಕ ಭಾಷೆಗಳಿಗೆ ಮಾರಕ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

Update: 2019-06-23 12:49 GMT

ಕಲಬುರಗಿ, ಜೂ.23: ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ತ್ರಿಭಾಷಾ ಸೂತ್ರ ಪ್ರಾದೇಶಿಕ ಭಾಷೆಗಳಿಗೆ ಮಾರಕವಾಗಲಿದ್ದು, ಈ ಬಗ್ಗೆ ಶಿಕ್ಷಣ ಹಾಗೂ ಭಾಷಾ ತಜ್ಞರು ಜನತೆಯಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ನಗರದಲ್ಲಿ ಡಾ.ಎಂ.ಎಸ್.ಪಂಡಿತ್ ರಂಗಮಂದಿರದಲ್ಲಿ ಆಯೋಜಿಸಿದ್ದ 2018-19ನೆ ಸಾಲಿನ ಎಸೆಸೆಲ್ಸಿ ಮತ್ತು ಪಿಯುಸಿ ರಾಜ್ಯಮಟ್ಟದ ಹಾಗೂ ತಾಲೂಕು ಮಟ್ಟದ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಕೇಂದ್ರ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ಹೊರಟಿದ್ದು, ಆ ಕುರಿತು ರಾಜ್ಯಗಳಿಂದ ಅಭಿಪ್ರಾಯವನ್ನು ಆಹ್ವಾನಿಸಿದೆ. ಇದಕ್ಕೆ ಸಂಬಂಧಿಸಿದ ಕರುಡು ನೀತಿ ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಹೊರಡಿಸಲಾಗಿಈದೆ. ಅದು ಎಲ್ಲ ಭಾಷೆಗಳಲ್ಲೂ ಪ್ರಕಟನವಾಗಬೇಕು. ಎಲ್ಲ ಭಾಷೆಗಳ ತಜ್ಞರು, ಸಂಘ ಸಂಸ್ಥೆಗಳು, ಆಯಾ ರಾಜ್ಯಗಳ ಸರಕಾರಗಳು, ರಾಜಕಾರಣಿಗಳು ಅಭಿಪ್ರಾಯ ನೀಡಬೇಕಿದೆ ಎಂದು ಅವರು ಮನವಿ ಮಾಡಿದರು.

ಕೇಂದ್ರೀಯ ವಿದ್ಯಾಲಯಗಳಲ್ಲಿ ಹಿಂದಿಯೇತರ ಪ್ರಾದೇಶಿಕ ಭಾಷೆಗಳನ್ನು ಒಂದು ಭಾಷೆಯನ್ನಾಗಿ ಜಾರಿಗೊಳಿಸುವ ಹಾಗೂ ಕೇಂದ್ರ ಸರಕಾರದ ಪರೀಕ್ಷೆಗಳಲ್ಲಿ ಆಯಾ ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವ ಬದ್ದತೆಯನ್ನು ಕೇಂದ್ರ ಸರಕಾರ ತೋರಬೇಕು. ಪ್ರಾದೇಶಿಕ ಭಾಷೆಗಳ ಕುರಿತು ಇಂತಹ ಬದ್ಧತೆ ತೋರದಿದ್ದರೆ ತ್ರಿಭಾಷಾ ಸೂತ್ರವನ್ನು ಅನುಮಾನದಿಂದಲೇ ನೋಡಬೇಕಾಗುತ್ತದೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರ ಒಕ್ಕೂಟ ವ್ಯವಸ್ಥೆಯನ್ನು, ಬಹುತ್ವವನ್ನು ಗೌರವಿಸಬೇಕಿದೆ. ತಮ್ಮ ಪ್ರಾದೇಶಿಕ ಭಾಷೆಗಳ ರಕ್ಷಣೆ ವಿಚಾರದಲ್ಲಿ ಮಹಾರಾಷ್ಟ್ರ, ಪಶ್ಚಿಮ ಬಂಗಾಲ, ತಮಿಳುನಾಡು ಮತ್ತಿತರ ರಾಜ್ಯಗಳು ಬದ್ಧತೆಯನ್ನು ಪ್ರದರ್ಶಿಸಲು ಆರಂಭಿಸಿರುವುದು ಸಂತಸದ ವಿಚಾರವಾಗಿದೆ ಎಂದು ಅವರು ಹೇಳಿದರು.

ಮಾತೃಭಾಷೆಯಲ್ಲೆ ಶಿಕ್ಷಣ ಪಡೆಯುವುದರಿಂದ ಗ್ರಹಿಕೆ, ಪ್ರತಿಭೆ, ಹೆಚ್ಚಿನ ಜ್ಞಾನ ದೊರೆಯುತ್ತದೆ ಎಂಬುದನ್ನು ಮಹಾತ್ಮ ಗಾಂಧೀಜಿ, ವಿವೇಕಾನಂದ, ಡಾ.ಬಿ.ಆರ್.ಅಂಬೇಡ್ಕರ್, ಕುವೆಂಪು ಸೇರಿದಂತೆ ಎಲ್ಲ ಭಾಷಾ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಂಶೋಧಕ ಡಾ.ವೀರಣ್ಣ ದಂಡೆ, ಸಂಸ್ಕೃತಿ ಚಿಂತಕಿ ಡಾ.ಜಯಶ್ರೀ ದಂಡೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ವೀರಭದ್ರಪ್ಪ ಸಿಂಪಿ, ಕನ್ನಡ ಜಾಗೃತಿ ಸಮಿತಿ ಸದಸ್ಯ ರಾಜಶೇಖರ್ ಮಾಂಗ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News