ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು: ಡಿಪಿಆರ್ ತಯಾರಿಕೆ ಕೈ ಬಿಡಲು ಬಿಎಸ್‌ವೈ ಒತ್ತಾಯ

Update: 2019-06-23 12:58 GMT

ಬೆಂಗಳೂರು, ಜೂ.23: ಲಿಂಗನಮಕ್ಕಿ ಜಲಾಶಯದಿಂದ ರಾಜಧಾನಿ ಬೆಂಗಳೂರಿಗೆ ನೀರು ತರುವ ಯೋಜನೆ ಕುರಿತು ವಿಸ್ತೃತ ಯೋಜನಾ ವರದಿ(ಡಿಪಿಆರ್) ತಯಾರಿಸಲು ಮುಂದಾಗಿರುವ ರಾಜ್ಯ ಸರಕಾರದ ಕ್ರಮ ಸರಿಯಲ್ಲ. ಈ ಕೂಡಲೆ ಡಿಪಿಆರ್ ತಯಾರಿಸುವ ಪ್ರಸ್ತಾವನೆಯನ್ನು ಕೈ ಬಿಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದರು.

ರವಿವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಹರಿಸುವ ಯೋಜನೆ ಅಸಮಂಜಸವಾಗಿದ್ದು, ರಾಜ್ಯ ಸರಕಾರವು ಈ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದರು.

ರಾಜ್ಯದ ಎದುರಿಸುತ್ತಿರುವ ವಾಸ್ತವ ಸಮಸ್ಯೆಗಳನ್ನು ಬಗೆಹರಿಸದೆ ಗ್ರಾಮ ವಾಸ್ತವ್ಯ ಮಾಡುತ್ತೇನೆ, ಸರಕಾರಿ ಶಾಲೆಗಳಲ್ಲಿ ಮಲಗುತ್ತೇನೆ ಎಂಬುದು ಮೂರ್ಖತನ. ಈ ಹಿಂದೆ ಮುಖ್ಯಮಂತ್ರಿ ವಾಸ್ತವ್ಯ ಹೂಡಿದ ಗ್ರಾಮ ಪರಿಸ್ಥಿತಿ ಹೇಗಿದೆ ಅನ್ನೋದು ಎಲ್ಲರಿಗೂ ಗೊತ್ತು ಎಂದು ಅವರು ಹೇಳಿದರು.

ರಾಜ್ಯದ ಬರಪರಿಸ್ಥಿತಿ ಅಧ್ಯಯನಕ್ಕಾಗಿ ಪ್ರವಾಸ ಕೈಗೊಂಡಿದ್ದಾಗ ವಿರೋಧ ಪಕ್ಷದ ನಾಯಕನಾಗಿದ್ದರೂ ಕೂಡ ಒಳ್ಳೆಯ ಕೆಲಸಗಳನ್ನು ಮಾಡಿರುವ ಅಧಿಕಾರಿಗಳನ್ನು ಶ್ಲಾಘಿಸಿದ್ದೇನೆ. ಕೆಲಸ ಮಾಡದ ಅಧಿಕಾರಿಗಳಿಗೆ ಛೀಮಾರಿಯೂ ಹಾಕಿದ್ದೇನೆ. ವಿರೋಧ ಪಕ್ಷದ ನಾಯಕನಾಗಿ ಯಾವ ರೀತಿ ಕೆಲಸ ಮಾಡಬೇಕು ಎಂಬುದುನ್ನು ಮುಖ್ಯಮಂತ್ರಿಯಿಂದ ಕಲಿಯುವ ಅಗತ್ಯ ನನಗಿಲ್ಲ ಎಂದು ಯಡಿಯೂರಪ್ಪ ಹೇಳಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ನನ್ನನ್ನು ಟೀಕಿಸುವ ಬದಲು ರಾಜ್ಯದ ಅಭಿವೃದ್ಧಿ ಕಡೆ ಗಮನ ಹರಿಸಲಿ. ಕಬ್ಬು ಬೆಳೆಗಾರರು ಬಾಕಿ ಹಣಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಕೇವಲ ಭರವಸೆಗಳಲ್ಲಿ ಕಾಲ ಹರಣ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಜನೌಷಧಿ ಮಳಿಗೆ ಮುಂದೆ ಅಳವಡಿಸಿದ್ದ ಬಿಜೆಪಿ ಬಾವುಟ ತೆರವುಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಹಿರಿಯರು, ಅನುಭವಿಗಳು. ಅವರು ಈ ರೀತಿ ಮಾಡಿರಲು ಸಾಧ್ಯವಿಲ್ಲ. ಈ ಸಂಬಂಧ ಅವರ ಜೊತೆ ಮಾತನಾಡುತ್ತೇನೆ ಎಂದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News