ಪುತ್ರನ ಸರಕಾರ ಉಳಿಸಿಕೊಳ್ಳಲು ದೇವೇಗೌಡರ ಪಾದಯಾತ್ರೆ: ಬಿಜೆಪಿ ಶಾಸಕ ಯತ್ನಾಳ್

Update: 2019-06-23 13:06 GMT

ವಿಜಯಪುರ, ಜೂ. 23: ‘ಪುತ್ರನ ಅಧಿಕಾರ ಉಳಿಸಿಕೊಳ್ಳಲು ಜೆಡಿಎಸ್ ವರಿಷ್ಠ ದೇವೇಗೌಡ ಲೋಕಸಭೆ ಚುನಾವಣೆ ಸೋಲಿನ ಬಳಿಕ ಹತಾಶರಾಗಿ ಪಾದಯಾತ್ರೆ ಮೂಲಕ ಹೊಸ ಅಧ್ಯಾಯ ಸೃಷ್ಟಿಸಲು ಹೊರಟಿದ್ದಾರೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಕಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರ ಕಲ್ಯಾಣಕ್ಕಾಗಿ ಮತ್ತು ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ಅವರು ಪಾದಯಾತ್ರೆ ಮಾಡುವುದಿಲ್ಲ ಎಂದು ಇದೇ ವೇಳೆ ವಾಗ್ದಾಳಿ ನಡೆಸಿದರು.

ಮಂಡ್ಯ ಜಿಲ್ಲೆಗೆ 8 ಸಾವಿರ ಕೋಟಿ ರೂ.ನೀಡಿದ್ದು, ಉತ್ತರ ಕರ್ನಾಟಕದ ಆರೇಳು ಜಿಲ್ಲೆಗಳಿಗೆ ಕೇವಲ 800ಕೋಟಿ ರೂ.ಹಣವನ್ನೂ ನೀಡದಿರುವುದಕ್ಕೆ ಪಾದಯಾತ್ರೆ ಮಾಡುತ್ತಾರೆಯೇ ಎಂದು ಪ್ರಶ್ನಿಸಿದ ಅವರು, ಎಲ್ಲ ಸಮುದಾಯದವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು ಅವರ ಉದ್ದೇಶವಲ್ಲ ಎಂದು ಲೇವಡಿ ಮಾಡಿದರು.

ಅವರಿಗೆ ಕೇವಲ ಮಂಡ್ಯ, ಮೈಸೂರು, ಹಾಸನ, ಬೆಂಗಳೂರು ಗ್ರಾಮೀಣ, ತುಮಕೂರು ಉದ್ದಾರವಾದರೆ ಸಾಕು. ದೇವೇಗೌಡರಿಗೆ ನಿಜವಾಗಿಯೂ ಜನರ ಬಗ್ಗೆ, ಉತ್ತರ ಕರ್ನಾಟಕದ ಬಗ್ಗೆ ಕಳಕಳಿಯಿದ್ದರೆ ಬಜೆಟ್‌ನಲ್ಲಿ ಉ.ಕ. ಭಾಗಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಎಂ.ಬಿ.ಪಾಟೀಲ್ ಸಚಿವರಾಗಿದ್ದಾಗ ಈ ಭಾಗದಲ್ಲಿ ಪ್ರಗತಿಯಲ್ಲಿದ್ದ ನೀರಾವರಿ ಯೋಜನೆಗಳು ಸ್ಥಗಿತಗೊಂಡಿವೆ. ಈಗ ಆ ಯೋಜನೆಗಳಿಗೆ ಎಷ್ಟು ಹಣ ಮೀಸಲಿಟ್ಟಿದ್ದೀರಿ ಎಂದು ಪ್ರಶ್ನಿಸಿದ ಅವರು, ಇಲ್ಲಿನ ನೀರಾವರಿ ಯೋಜನೆಗಳು ವಿಜಯಪುರದ ಐತಿಹಾಸಿಕ ಬಾರಾ ಕಮಾನ್‌ನಂತೆ ಅರ್ಧಕ್ಕೆ ನಿಂತಿವೆ ಎಂದರು.

ರಾಜ್ಯದ ಪಾಲಿನ ನೀರನ್ನು ಉಳಿಸಿಕೊಳ್ಳಲು, ಆಲಮಟ್ಟಿ ಜಲಾಶಯದ ಎತ್ತರವನ್ನು ಹೆಚ್ಚಿಸಲು 1 ಕೋಟಿ ರೂ.ನೀಡುವ ಮೂಲಕ ಸಚಿವ ಡಿಕೆಶಿ, ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ ಕ್ರಮ ಕೈಗೊಳ್ಳಲಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News