ಸಕಲೇಶಪುರ: ರಸ್ತೆ ಅಪಘಾತಕ್ಕೆ ಬೈಕ್ ಸವಾರ ಬಲಿ
Update: 2019-06-23 18:49 IST
ಸಕಲೇಶಪುರ, ಜೂ.23: ರಾಷ್ಟ್ರೀಯ ಹೆದ್ದಾರಿ 75 ರ ಕುಂಬಾರಗಟ್ಟೆ ಸಮೀಪ ಕ್ರೂಸರ್- ಬೈಕ್ ನಡುವೆ ಮುಖಮುಖಿ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ರವಿವಾರ ಮಧ್ಯಾಹ್ನ ಉಡುಪಿ ಕಡೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಬೈಕ್ ಸವಾರ ಶ್ರವಣ್ ಪುಜಾರಿ(28)ಗೆ ಬಾಗಲಕೋಟೆ ಮೂಲದ ಕ್ರೂಸರ್ ಢಿಕ್ಕಿ ಹೊಡೆದಿದ್ದು, ಪರಿಣಾಮ ಶ್ರವಣ್ ಪುಜಾರಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತ ಶ್ರವಣ್ ಪುಜಾರಿ ಕಂಪ್ಯೂಟರ್ ಇಂಜಿನಿಯರ್ ಅಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ. ಕ್ರೂಸರ್ ನಲ್ಲಿ 12 ಮಂದಿ ಬಾಗಲಕೋಟೆಯಿಂದ ಧರ್ಮಸ್ಥಳಕ್ಕೆ ಪ್ರವಾಸಕ್ಕೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಗ್ರಾಮಾಂತರ ಠಾಣಾ ಕ್ರೈಮ್ ವಿಭಾಗದ ಪಿಎಸ್‍ಐ ಪುಟ್ಟರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಭಂದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.