ಶೋಷಣೆ ಮುಕ್ತ ಸಮಾಜಕ್ಕೆ ಬುದ್ಧ, ಬಸವ, ಅಂಬೇಡ್ಕರ್ ಚಿಂತನೆ ಅತ್ಯಗತ್ಯ: ಡಿ.ಶಿವಶಂಕರ್

Update: 2019-06-23 13:32 GMT

ಚಿಕ್ಕಮಗಳೂರು, ಜೂ.23: ಅಂಬೇಡ್ಕರ್, ಬುದ್ಧ, ಬಸವಣ್ಣನವರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಮುಖಿ ಕೆಲಸಗಳನ್ನು ಮಾಡಬೇಕೆಂದು ಎಸ್ಸಿ-ಎಸ್ಟಿ ಸರಕಾರಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ.ಶಿವಶಂಕರ್ ತಿಳಿಸಿದರು.

ರವಿವಾರ ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಎಸ್ಸಿ-ಎಸ್ಟಿ ಸರಕಾರಿ ನೌಕರರ ಸಮನ್ವಯ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ವನಮನ ಸಲ್ಲಿಸಿ ಮಾತನಾಡಿದ ಅವರು, ಶೋಷಣೆ ಮುಕ್ತ ವ್ಯವಸ್ಥೆಗೆ ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆಗಳನ್ನು ಯುವ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ದೇಶದ ಪ್ರತಿಯೊಬ್ಬರೂ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ದಲಿತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿರುವುದು ತೀವ್ರ ಖಂಡನೀಯ ವಿಷಯ. ಈ ನಿಟ್ಟಿನಲ್ಲಿ ಡಾ.ಬಾಬಾ ಅಂಬೇಡ್ಕರ್ ಸಾಹೇಬ್ ರವರ ಅವಿರತ ಹೋರಾಟದ ಫಲವಾಗಿ ಮೀಸಲಾತಿ ಪಡೆದು ನಾವೆಲ್ಲರೂ ವಿದ್ಯಾವಂತರಾಗಿ ಉದ್ಯೋಗ ಪಡೆದಿದ್ದೇವೆ. ಪರಿಶಿಷ್ಟ ಜಾತಿ ಪಂಗಡದವರು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಉತ್ತಮ ಮಾರ್ಗದರ್ಶನ ನೀಡಿದಾಗ ಮಾತ್ರ ಇಂತಹ ಜಯಂತಿ ಕಾರ್ಯಕ್ರಮಗಳು ಅರ್ಥಪೂರ್ಣ ಆಗುತ್ತದೆ ಎಂದರು.

ಮಂಗಳೂರು, ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಪ್ರೊ.ಭಾಸ್ಕರ್ ವಿಟ್ಲ ಮಾತನಾಡಿ, ಸರಕಾರಿ ನೌಕರರು ಸಂಘಟನೆಗಳನ್ನು ಕಟ್ಟಿಕೊಂಡು ನಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ಸಾಧ್ಯ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸ್ಥಿತಿ ಗತಿಗಳನ್ನು ಕಾಪಾಡುವ ಮುಖ್ಯ ಜವಾಬ್ದಾರಿ ವಿದ್ಯಾವಂತ ಶೋಷಿತ ಸಮುದಾಯಗಳ ಉದ್ಯೋಗಿಗಳ ಮೇಲಿದೆ ಎಂದರು. 

ಈ ಸಂದರ್ಭದಲ್ಲಿ ಎಸ್ಸಿ-ಎಸ್ಟಿ ಸರಕಾರಿ ನೌಕರರ ಸಮನ್ವಯ ಸಮಿತಿಯ ಜಿಲ್ಲಾಧ್ಯಕ್ಷ ಲೋಕೇಶಪ್ಪ, ಮಂಗಳೂರು ವಿಶ್ವ ವಿದ್ಯಾನಿಲಯದ ಇತಿಹಾಸ ಪ್ರಾಧ್ಯಾಪಕ ಪ್ರೊ.ನಿರ್ಮಲ್‍ರಾಜ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ರಾಜ್ಯ ಸಂಘಟನಾ ಕಾರ್ಯದರ್ಶಿ ವಿಜಯಕುಮಾರ್, ಉಪಾಧ್ಯಕ್ಷ ಮೋಹನ್, ದೇವಿರಮ್ಮ, ಡಾ.ಬಾಲಕೃಷ್ಣ, ರಾಜಣ್ಣ, ಕಾಂಚನ ದೊಡ್ಡಮನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗೇಶ್, ಖಜಾಂಚಿ ರವಿಕುಮಾರ್, ಗುರುದತ್, ಎಚ್.ಡಿ.ರೇವಣ್ಣ, ಕೃಷ್ಣಪ್ಪ, ಮಂಜುನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News