ಐದು ವರ್ಷ ಮೈತ್ರಿ ಸರಕಾರ ಸುಭದ್ರ: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ

Update: 2019-06-23 13:38 GMT

ಮಂಡ್ಯ, ಜೂ.23: ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ರಾಜ್ಯ ಸರಕಾರ ಬೀಳುವ ಪ್ರಶ್ನೆಯೇ ಇಲ್ಲ. ಐದು ವರ್ಷ ಸರಕಾರ ಸುಭದ್ರವಾಗಿರುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ನಾಯಕರು ಮೈತ್ರಿ ಬೇಡವೆಂದು ಹೇಳಿಲ್ಲ. ಎಚ್.ವಿಶ್ವನಾಥ್ ಅವರ ಹೇಳಿಕೆ ಅವರ ಪಕ್ಷದ ಆಂತರಿಕ ವಿಚಾರ. ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನೆಡೆಗೆ ಸಾಕಷ್ಟು ಕಾರಣಗಳಿಗೆ. ಆದರೆ, ಜೆಡಿಎಸ್ ಜತೆಗಿನ ಮೈತ್ರಿ ಕಾರಣವೇ ಅಲ್ಲ. ಬಿಜೆಪಿ ಅವರ ಸುಳ್ಳು, ಅಪಪ್ರಚಾರ, ವಂಚನೆ, ಜನರ ದಿಕ್ಕುತಪ್ಪಿಸುವ ಕೆಲಸ ಕಾಂಗ್ರೆಸ್ ಸೋಲಿನ ಕಾರಣಗಳಲ್ಲಿ ಸೇರಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಸೋಲಿಗೆ ಕಾರಣವೇನೆಂಬುದನ್ನು ತಿಳಿದುಕೊಳ್ಳಲು ಸತ್ಯ ಶೋಧನಾ ಸಮಿತಿ ರಚನೆ ಮಾಡಿದ್ದೇವೆ. ಪ್ರತಿ ಜಿಲ್ಲೆಗೆ ಸಮಿತಿ ಸದಸ್ಯರು ಭೇಟಿ ನೀಡಿ ನಮಗೆ ವರದಿ ಕೊಡುತ್ತಾರೆ. ನಂತರ ಅದರ ವಿಶ್ಲೇಷಣೆ ಮಾಡುತ್ತೇವೆ ಎಂದರು.

ಕೆಪಿಸಿಸಿ ಪದಾಧಿಕಾರಿಗಳ ನೇಮಕಕ್ಕೆ ಹೈಕಮಾಂಡ್ ಸೂಚಿಸಿದ್ದು, ಆ ಪ್ರಕ್ರಿಯೆ ಸಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಸದ್ಯಕ್ಕೆ ಖಾಲಿ ಇಲ್ಲ. ಅಧ್ಯಕ್ಷ, ಕಾರ್ಯಾಧ್ಯಕ್ಷರ ಬದಲಾವಣೆ ಪಕ್ಷದ ಹೈಕಮಾಂಡ್‍ಗೆ ಬಿಟ್ಟ ವಿಚಾರ. ಮುಂದಿನ ದಿನಗಳಲ್ಲಿ ಪಕ್ಷವನ್ನು ಸಂಘಟಿಸಲು ಒತ್ತು ನೀಡಲಾಗುವುದು ಎಂದು ಅವರು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News