ತುಂಗಭದ್ರಾ ಡ್ಯಾಂನಿಂದ ಬಳ್ಳಾರಿಗೆ ನೀರು ಪೂರೈಸಲು ಕ್ರಮ: ಸಚಿವ ಯು.ಟಿ.ಖಾದರ್

Update: 2019-06-23 14:25 GMT

ಬಳ್ಳಾರಿ, ಜೂ.23: ಬಳ್ಳಾರಿ ನಗರಕ್ಕೆ ಶಾಶ್ವತವಾಗಿ 12 ತಿಂಗಳು ನೀರು ಪೂರೈಸಲು ತುಂಗಭದ್ರಾ ಜಲಾಶಯದಿಂದ ಪೈಪ್‌ಲೈನ್ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಈಗಾಗಲೇ ಪಾಲಿಕೆಯಿಂದ ಪ್ರಸ್ತಾವನೆ ಬಂದಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ರವಿವಾರ ನೀರು ಪೂರೈಸುವ ಅಲ್ಲಿಪುರ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

ಪಾಲಿಕೆಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ವಿಭಾಗದ ಮುಖ್ಯ ಇಂಜಿನಿಯರ್ ಎಸ್.ಎನ್.ದಿನೇಶ್ ಮಾತನಾಡಿ, ಅಲ್ಲಿಪುರ ಕೆರೆ 5.6 ಕಿಮೀ ವಿಸ್ತೀರ್ಣ ಹೊಂದಿದ್ದು, 12600 ಎಂಎಲ್‌ಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿಗೆ. 3.6 ಕಿಮೀ ಕೆರೆಯ ಬಂಡ್ ದುರಸ್ತಿಪಡಿಸಲಾಗಿದೆ. 15 ವರ್ಷ ಕೆರೆಗೆ ಯಾವುದೇ ಸಮಸ್ಯೆಯಿಲ್ಲ ಎಂದು ವಿವರಿಸಿದರು. ಈ ವೇಳೆ, ಇನ್ನುಳಿದ 2 ಕಿಮೀ ಬಂಡ್ ಜತೆಗೆ ಅವಶ್ಯವಿದ್ದರೆ, ಮೋಕಾ ಕೆರೆ ದುರಸ್ತಿಗೊಳಿಸಿ ಎಂದು ಸಚಿವರು ಸೂಚಿಸಿದರು.

ಶಾಸಕ ಜಿ.ಸೋಮಶೇಖರರೆಡ್ಡಿ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಇಂಜಿಯರ್‌ಗಳಾದ ವೀರನಗೌಡ, ಗಂಗಾಧರಗೌಡ, ಪಾಲಿಕೆ ಸದಸ್ಯರಾದ ಮಲ್ಲನಗೌಡ, ಮೋತ್ಕರ್ ಶ್ರೀನಿವಾಸ್, ವೆಂಕಟರಮಣ ಉಪಸ್ಥಿತರಿದ್ದರು.

ಸಚಿವರ ಎದುರೇ ಕ್ಲಾಸ್: ಅಲ್ಲಿಪುರ ಕೆರೆಗೆ ನಗರಾಭಿವೃದ್ದಿ ಸಚಿವ ಯು.ಟಿ.ಖಾದರ್ ಭೇಟಿ ನೀಡಿದ ವೇಳೆ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಪಾಲಿಕೆಯ ಇಂಜಿನಿಯರ್ ಎಸ್.ಎನ್.ದಿನೇಶರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲಿಪುರ ಕೆರೆ ಕಲುಷಿತಗೊಳ್ಳುವುದಿಲ್ಲ ಎಂದು ಹೇಳುತ್ತಿದ್ದೀರಿ. ಸುತ್ತಲಿನ ಪ್ರದೇಶ ಯಾವ ರೀತಿಯಿದೆ ಎಂದು ನೋಡಿದ್ದೀರಾ? ತುಂಗಭದ್ರಾ ಜಲಾಶಯ, ಕುಡಿತಿನಿ ಕೆರೆಗೆ ಒಮ್ಮೆಯಾದರೂ ಭೇಟಿ ನೀಡಿದ್ದೀರಾ? ಅಲ್ಲಿನ ನೀರಿಗೆ ಯಾವ ಪರಿಸ್ಥಿತಿ ಬಂದಿದೆ ಎಂದು ಗಮನಿಸಿದ್ದೀರಾ ಎಂದು ಗದರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News