ಬಿಜೆಪಿ ಪ್ರಾದೇಶಿಕ ಪಕ್ಷಗಳನ್ನು ನುಂಗುತ್ತಿದ್ದರೆ, ಕಾಂಗ್ರೆಸ್ ಇದ್ದೂ ಸತ್ತಂತಿದೆ: ದಿನೇಶ್ ಅಮೀನ್ ಮಟ್ಟು

Update: 2019-06-23 15:23 GMT

ಮೈಸೂರು, ಜೂ.23: ರಾಷ್ಟ್ರೀಯ ಪಕ್ಷ ಬಿಜೆಪಿ ಪ್ರಾದೇಶಿಕ ಪಕ್ಷಗಳನ್ನು ನುಂಗುತ್ತಿದ್ದರೆ, ಕಾಂಗ್ರೆಸ್ ಪಕ್ಷ ಇದ್ದೂ ಸತ್ತಂತಿದೆ ಎಂದು ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯ ಪಟ್ಟರು.

ದೇಸಿರಂಗ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ರವಿವಾರ ಕಲಾಮಂದಿರದ ಮನೆಯಂಗಳದಲ್ಲಿ ಆಯೋಜಿಸಿದ್ದ ಪ್ರೊ.ಕೆ.ರಾಮದಾಸ್ ನೆನಪಿನಲ್ಲಿ ಸಂವಾದ, ಪುಸ್ತಕ ಬಿಡುಗಡೆ, ಲೇಖನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮಲ್ಲಿರುವ ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ನುಂಗುತ್ತಿವೆ. ಕಾಂಗ್ರೆಸ್ ತನ್ನ ವೈಫಲ್ಯದಿಂದ ಚುನಾವಣೆಯಲ್ಲಿ ಸೋಲುತ್ತಿದ್ದು, ಬಿಜೆಪಿ ಪ್ರಾದೇಶಿಕ ಪಕ್ಷಗಳನ್ನು ನುಂಗುತ್ತಿದೆ. ಪ್ರಾದೇಶಿಕ ಪಕ್ಷಗಳು ತನ್ನ ಸ್ಥಾನವನ್ನು ಹಿಡಿದಿಟ್ಟುಕೊಳ್ಳಲು ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇತ್ತೀಚೆಗೆ ಸ್ವರಾಜ್ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್, ಕಾಂಗ್ರೆಸ್ ಪಕ್ಷ ಸಾಯಬೇಕು ಎಂದು ಹೇಳಿದ್ದರು. ಅವರು ಹೇಳಿದ್ದು ನಿಜ ಅನಿಸುತ್ತಿದೆ. ಸದ್ಯದ ಕಾಂಗ್ರೆಸ್ ಪಕ್ಷ ಇದ್ದೂ ಸತ್ತಂತಿದೆ. ಬಿಜೆಪಿ ಅಧಿಕಾರ ಹಿಡಿಯುವುದಕ್ಕೆ ಅದು ತನ್ನ ಸಿದ್ಧಾಂತ ಮುಂದಿಟ್ಟು, ಕಾರ್ಯತಂತ್ರ ರೂಪಿಸಿ ಸಫಲವಾಗುತ್ತಿದೆ. ಸಿದ್ಧಾಂತವಿರುವ ಪಕ್ಷವನ್ನು ಎದುರಿಸಲು ಮತ್ತೊಂದು ಸಿದ್ಧಾಂತವಿರುವ ಪಕ್ಷದಿಂದಲೇ ಸಾಧ್ಯ. ಕಮ್ಯುನಿಸ್ಟರಲ್ಲಿ ಆ ಸಿದ್ಧಾಂತವಿದ್ದರೂ ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳ ಸ್ಥಿತಿ ನೋಡಿದರೆ ಇತರೆ ಪಕ್ಷಗಳಿಂದ ಅದು ಸಾಧ್ಯವಿಲ್ಲ ಅನಿಸುತ್ತದೆ ಎಂದು ಹೇಳಿದರು.

ಇದೇ ರೀತಿಯ ವಾತಾವರಣ ಮುಂದುವರೆದರೆ ಬಿಜೆಪಿಗೆ ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯವನ್ನು ಬಿಟ್ಟುಕೊಡಬೇಕಾಗುತ್ತದೆ. ರಾಜ್ಯದ ಮೈತ್ರಿ ಪಕ್ಷಗಳ ಅಭ್ಯರ್ಥಿಗಳು ಸೋತಾಗ ಯಾರು ಹೆಚ್ಚು ಖುಷಿಪಟ್ಟರು ಎಂಬುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ಬಿಟ್ಟು ಕೊಟ್ಟ ಜಾಗವನ್ನು ಪ್ರಾದೇಶಿಕ ಪಕ್ಷಗಳಿಗೆ ತುಂಬಲು ಸಾಧ್ಯವಾಗುತ್ತಿಲ್ಲ. ಸ್ವಾರ್ಥ ರಾಜಕಾರಣದಿಂದ ಕರ್ನಾಟಕದಲ್ಲಿ ಮೈತ್ರಿ ಅಭ್ಯರ್ಥಿಗಳು ಸೋತರೇ ವಿನಃ, ಬಿಜೆಪಿಯಿಂದಲ್ಲ ಎಂದು ದಿನೇಶ್ ಅಮೀನ್ ಮಟ್ಟು ಹೇಳಿದರು.

ಈಗಿನ ವಿದ್ಯಾರ್ಥಿಗಳಿಗೆ ಇತಿಹಾಸದ ಅರಿವಿಲ್ಲ. ವಾಟ್ಸ್ ಅಪ್‍ನಲ್ಲಿ ಕಂಡದ್ದೇ ಇತಿಹಾಸವೆನ್ನುತ್ತಿದ್ದಾರೆ. 18 ರಿಂದ 34 ವರ್ಷದೊಳಗಿನ ಯುವಜನರು ಸುಳ್ಳು ಸುದ್ದಿಗಳಿಗೆ ಮಾರು ಹೋಗಿ ವಿಸ್ಮತಿಗೆ ಒಳಗಾಗಿದ್ದಾರೆ. ಅವರನ್ನು ಬದಲಿಸುವುದು ಕಷ್ಟವಾಗಿದೆ. ಹೀಗಾಗಿ ನಾನು ಕಳೆದ ಎರಡು ತಿಂಗಳಿನಿಂದ ಸುಮ್ಮನಾಗಿದ್ದೇನೆ. ಬಿಜೆಪಿಯವರ ಭಯದಿಂದಲ್ಲ, ನಮ್ಮವರನ್ನಾದರೂ ಬದಲಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ರೈತ ನಾಯಕಿ ಸುನಂದ ಜಯರಾಂ ಪುಸ್ತಕ ಬಿಡುಗಡೆ ಮಾಡಿದರು. ಸಮಾಜವಾದಿ ಚಿಂತಕ ಪ.ಮಲ್ಲೇಶ್ ಅಧ್ಯಕ್ಷತೆ ವಹಿಸಿದ್ದರು. ರಂಗನಟ ಮಂಡ್ಯ ರಮೇಶ್, ದೇಸಿರಂಗ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಜನಮನ ಕೃಷ್ಣ, ದಿನಮಣಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News