ಶಿವಮೊಗ್ಗ: ಸ್ಮಾರ್ಟ್‌ಸಿಟಿ ಯೋಜನೆ- ಎಲ್‌ಇಡಿ ದೀಪಗಳ ಅಳವಡಿಕೆಗೆ ನಿರ್ಧಾರ

Update: 2019-06-23 17:07 GMT

ಶಿವಮೊಗ್ಗ, ಜೂ. 23: ಸ್ಮಾರ್ಟ್ ಸಿಟಿ ಯೋಜನೆಯಡಿ, ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಬೀದಿ ದೀಪಗಳ ನಿರ್ವಹಣೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಕ್ರಮಕೈಗೊಳ್ಳಲಾಗಿದೆ. ಎಲ್‌ಇಡಿ ದೀಪಗಳ ಅಳವಡಿಕೆಗೆ ಸ್ಮಾರ್ಟ್ ಸಿಟಿ ಲಿಮಿಟೆಡ್ ನಿರ್ಧರಿಸಿದೆ. ಖಾಸಗಿ ಸಹಭಾಗಿತ್ವದಡಿ ಎಲ್‌ಇಡಿ ಬೀದಿ ದೀಪ ಅಳವಡಿಕೆ, ನಿರ್ವಹಣೆ, ಮೇಲುಸ್ತುವಾರಿಗೆ ಯೋಜನೆ ರೂಪಿಸಲಾಗಿದೆ.

ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣೆ ವ್ಯವಸ್ಥೆ(ಸಿ.ಸಿ.ಎಂ.ಎಸ್) ಕಾರ್ಯಗತಗೊಳಿಸಲು ಸ್ಮಾರ್ಟ್ ಸಿಟಿ ಲಿಮಿಟೆಡ್ ಮುಂದಾಗಿದೆ. ಆದರೆ ಅರ್ಹ ಖಾಸಗಿ ವ್ಯಕ್ತಿಗಳು ಲಭ್ಯವಾಗದ ಕಾರಣದಿಂದ, ಬೀದಿ ದೀಪ ನಿರ್ವಹಣೆ ಯೋಜನೆ ನನೆಗುದಿಗೆ ಬೀಳುವಂತಾಗಿದೆ. ಈಗಾಗಲೇ ಸ್ಮಾರ್ಟ್ ಸಿಟಿ ಲಿಮಿಟೆಡ್ ಎರಡು ಬಾರಿ ಅರ್ಹರಿಂದ ಅರ್ಜಿ ಆಹ್ವಾನಿಸಿತ್ತು. ಸೂಕ್ತ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಇದೀಗ ಮೂರನೇ ಬಾರಿ ಪ್ರಕಟನೆ ಹೊರಡಿಸಿದೆ. ಕರ್ನಾಟಕ ಪಾರದರ್ಶಕ ಅಧಿನಿಯಮದಡಿ ಅರ್ಹರಿಂದ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಬೀದಿ ದೀಪ ಅಳವಡಿಕೆ-ನಿರ್ವಹಣೆ ಗುತ್ತಿಗೆ ವಹಿಸಿಕೊಳ್ಳುವ ಖಾಸಗಿ ವ್ಯಕ್ತಿ-ಸಂಸ್ಥೆಗಳು, ಗುತ್ತಿಗೆ ತೆಗೆದುಕೊಂಡ ಆರು ತಿಂಗಳೊಳಗೆ ನಗರ ವ್ಯಾಪ್ತಿಯಲ್ಲಿರುವ ಸೋಡಿಯಂ ವೇಪರ್ ಹಾಗೂ ಟ್ಯೂಬ್‌ಲೈಟ್‌ಗಳನ್ನು ತೆಗೆದು ಎಲ್‌ಇಡಿ ಲೈಟ್‌ಗಳನ್ನು ಅಳವಡಿಸಬೇಕು. 7 ವರ್ಷಗಳವರೆಗೆ ನಿರ್ವಹಣೆ ಜವಾಬ್ದಾರಿಯಿರುತ್ತದೆ ಎಂದು ಸ್ಮಾರ್ಟ್ ಸಿಟಿ ಮೂಲಗಳು ತಿಳಿಸಿವೆ. 

ಬೀದಿ ದೀಪಗಳ ಅಳವಡಿಕೆ-ನಿರ್ವಹಣೆಯು ಪಾಲಿಕೆ ಆಡಳಿತಕ್ಕೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಇದಕ್ಕಾಗಿ ವಾರ್ಷಿಕ ಕೋಟ್ಯಂತರ ರೂ. ವ್ಯಯಿಸುತ್ತಿದೆ. ಇಷ್ಟೆಲ್ಲದರ ಹೊರತಾಗಿಯೂ ಗೊಂದಲಗಳಿಂದ ಮುಕ್ತವಾಗಿಲ್ಲ. ಅಕ್ಷರಶಃ ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ. ಸೋಡಿಯಂ ವೇಪರ್, ಟ್ಯೂಬ್‌ಲೈಟ್ ಬಳಕೆಯಿಂದ ವಿದ್ಯುತ್ ಶುಲ್ಕದ ಮೊತ್ತ ಕೂಡ ಹೆಚ್ಚಿದೆ. ಈ ಕಾರಣದಿಂದ ನಗರ ವ್ಯಾಪ್ತಿಯಲ್ಲಿ ಎಲ್‌ಇಡಿ ಬೀದಿ ದೀಪ ಅಳವಡಿಸುವ ಹಾಗೂ ಇದರ ಸಂಪೂರ್ಣ ನಿರ್ವಹಣೆಯನ್ನು ಖಾಸಗಿಗೆ ವಹಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಎಲ್‌ಇಡಿ ಲೈಟ್‌ಗಳಲ್ಲಿ ವಿದ್ಯುತ್ ಬಳಕೆ ಪ್ರಮಾಣ ಕಡಿಮೆಯಿರುತ್ತದೆ. ಹಾಗೆಯೇ ದುರಸ್ತಿಗೀಡಾಗುವ ಸಾಧ್ಯತೆಯೂ ವಿರಳವಾಗಿರುತ್ತದೆ. ಇದರಿಂದ ಪಾಲಿಕೆ ಆಡಳಿತಕ್ಕೆ ಆರ್ಥಿಕ ಹೊರೆ ತಪ್ಪಲಿದೆ. ಜೊತೆಗೆ ಪರಿಣಾಮಕಾರಿಯಾಗಿ ನಿರ್ವಹಣೆ ಸಾಧ್ಯ ಎಂದು ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ಅಭಿವೃದ್ಧಿ: ನಗರದ ಹೃದಯ ಭಾಗದಲ್ಲಿರುವ ಖಾಸಗಿ ಬಸ್ ನಿಲ್ದಾಣವು ಸದ್ಯ ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ. ಹತ್ತು ಹಲವು ಸಮಸ್ಯೆಗಳಿಂದ ಕೂಡಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಬಸ್ ಟರ್ಮಿನಲ್‌ಗೆ ಕಾಯಕಲ್ಪ ನೀಡಲು ನಿರ್ಧರಿಸಲಾಗಿದೆ.

ಮೂಲಸೌಕರ್ಯ, ಸ್ವಚ್ಛತೆ, ಲೈಟ್‌ಗಳ ನಿರ್ವಹಣೆ ಸೇರಿದಂತೆ ಬಸ್ ನಿಲ್ದಾಣದಲ್ಲಿ ಹತ್ತು ಹಲವು ಸಮಸ್ಯೆಗಳ ಪರಿಹಾರಕ್ಕೆ ನಿರ್ಧರಿಸಲಾಗಿದೆ. ಈ ಸಂಬಂಧ ಅರ್ಹ ಗುತ್ತಿಗೆದಾರರಿಂದ ಟೆಂಡರ್ ಆಹ್ವಾನಿ ಸಲಾಗಿದೆ. ಈ ಹಿಂದೆ ಆಹ್ವಾನಿಸಲಾಗಿದ್ದ ಟೆಂಡರ್‌ನಲ್ಲಿ ಗುತ್ತಿಗೆ ದಾರರು ಭಾಗವಹಿಸದ ಕಾರಣದಿಂದ, ಬಸ್ ನಿಲ್ದಾಣ ಅಭಿವೃದ್ಧಿ ಕಾರ್ಯವಿಳಂಬವಾಗುವಂತಾಗಿದೆ ಎಂದು ಸ್ಮಾರ್ಟ್ ಸಿಟಿ ಮೂಲಗಳು ಮಾಹಿತಿ ನೀಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News