ಮೈಸೂರಿನಲ್ಲಿ 'ಕೊಡಗಿನ ತಲ್ಲಣ’ ಪುಸ್ತಕ ಬಿಡುಗಡೆ

Update: 2019-06-23 17:27 GMT

ಮೈಸೂರು, ಜೂ.23: ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಬರೆದ 'ಕೊಡಗಿನ ತಲ್ಲಣ, ದುರಂತದ ಹಿಂದಿನ ಸತ್ಯಗಳು' ಕೃತಿ ಮೈಸೂರಿನಲ್ಲಿ ರವಿವಾರ ಬಿಡುಗಡೆಯಾಯಿತು.

ಮೈಸೂರು ಪತ್ರಕರ್ತರ ಸಂಘ ಹಾಗೂ ಯುಕ್ತ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ವನ್ಯಜೀವಿ ತಜ್ಞ ಕೃಪಾಕರ, ಜಲಪ್ರಳಯ ಕೇವಲ ಕೊಡಗಿನ ತಲ್ಲಣವಲ್ಲ. ಇದು ಜಾಗತಿಕ ತಲ್ಲಣ. ಜಗತ್ತಿನಾದ್ಯಂತ ಇದು ನಡೆಯುತ್ತಿದೆ ಎಂದು ಅಭಿಪ್ರಾಯಪಟ್ಟರು. 

ಈ ಪುಸ್ತಕದಲ್ಲಿ ಕೊಡಗಿನ ಚಾರಿತ್ರ್ಯ, ಇತಿಹಾಸ, ಬದುಕು ಅನಾವರಣಗೊಂಡಿದೆ. ಇದೊಂದು ಸಂಗ್ರಹ ಯೋಗ್ಯ ಪುಸ್ತಕ. ಅಲ್ಲದೆ, ಪ್ರಸ್ತುತ ಸನ್ನಿವೇಶದಲ್ಲಿ ಪ್ರಾಕೃತಿಕ ಸಂಪನ್ಮೂಲಗಳನ್ನು ಹೇಗೆ ಉಳಿಸಿಕೊಳ್ಳಬೇಕಿದೆ ಎಂಬುದು ಸವಾಲಿನ ವಿಷಯವನ್ನು ಚರ್ಚಿಸಬೇಕಿದೆ ಎಂದರು. 

ಜಾರ್ಖಂಡ್‍ನ ಬಸ್ಟರ್ ಎಂಬ ಜಿಲ್ಲೆಯ ಇಂದ್ರಾವತಿ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿ ಯೋಜನೆ ನಡೆಯಿತು. ಮೂರು ವರ್ಷದ ಹಿಂದೆ ಕೇಂದ್ರ ಸರಕಾರ ಯೋಜನೆಯ ಕೆಲವು ಭಾಗಗಳನ್ನು ಡಿ ನೋಟಿಫಿಕೇಶನ್ ಮಾಡಿತು. ಆ ನೆಪದಲ್ಲಿ ಹುಲಿ ಯೋಜನೆಗೆ ತೊಡಕಾಗುತ್ತಾರೆ ಎಂದು ಅಲ್ಲಿದ್ದ ಆದಿವಾಸಿಗಳನ್ನು ಬಲವಂತವಾಗಿ ಆಚೆ ಹಾಕಲಾಗುತ್ತದೆ. ಆದರೆ, ಇದಾದ 3 ತಿಂಗಳಿನಲ್ಲಿ ಅದಾನಿ ಗ್ರೂಪ್‍ಗೆ ಆ ಜಾಗವನ್ನು ಮೈನಿಂಗ್‍ಗೆ ಕೊಡಲಾಗುತ್ತದೆ. ಭಾರತದಲ್ಲಿ ಇದು ಸುದ್ದಿಯಾಗಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

ಪುಸ್ತಕದ ಬಗ್ಗೆ ಪ್ರಾಧ್ಯಾಪಕ ಡಾ.ಬೆಸೂರು ಮೋಹನ ಪಾಳೇಗಾರ, ವಿಜಯ ಕರ್ನಾಟಕ ಪತ್ರಿಕೆ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅಭಿಪ್ರಾಯ ತಿಳಸಿದರು.

ಪುಸ್ತಕದ ಲೇಖಕ ಹಾಗೂ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಮಾತನಾಡಿ, 'ಪತ್ರಕರ್ತನಾಗಿ ಕೊಡಗಿನಲ್ಲಿ ಕಳೆದ ವರ್ಷ ನಡೆದ ಜಲಪ್ರಳಯವನ್ನು ಕಣ್ಣಾರೆ ಕಂಡು ಪುಸ್ತಕ ರೂಪದಲ್ಲಿ ಅನುಭವವನ್ನು ದಾಖಲಿಸಿದ್ದೇನೆ. ಕೊಡಗಿನಲ್ಲಿ ಜಲಪ್ರಳಯವಾದಾಗ ಒಂದೊಂದು ಮಾಧ್ಯಮಗಳು ಒಂದೊಂದು ರೀತಿಯಲ್ಲಿ ಸುದ್ದಿ ಬಿತ್ತರಿಸಿದವು. ಹಲವರು ಮತ್ತದೇ ರೀತಿಯಲ್ಲಿ ವಾದ ಮಂಡಿಸಿದರು. ಇದೆಲ್ಲವನ್ನೂ ಅಂಶಗಳು 'ಕೊಡಗಿನ ತಲ್ಲಣ' ಪುಸ್ತಕ ಬರೆಯಲು ನನಗೆ ಪ್ರೇರೇಪಿಸಿತು ಎಂದರು.

ವನ್ಯಜೀವಿ ತಜ್ಞ ಸೇನಾನಿ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಯುಕ್ತಾ ಪ್ರಕಾಶನದ ಪ್ರಕಾಶಕರಾದ ಓಂಕಾರಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News