ಅಭಿನಂದನ್ ಮೀಸೆಯನ್ನು ರಾಷ್ಟ್ರೀಯ ಮೀಸೆಯನ್ನಾಗಿ ಮಾಡಬೇಕು: ಕಾಂಗ್ರೆಸ್ ಸಂಸದ

Update: 2019-06-24 14:19 GMT

ಹೊಸದಿಲ್ಲಿ, ಜೂ.24: ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರ ಮೀಸೆಗೆ ರಾಷ್ಟ್ರೀಯ ಮೀಸೆಯ ಸ್ಥಾನಮಾನ ನೀಡಬೇಕೆಂದು ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸೋಮವಾರ ಆಗ್ರಹಿಸಿದ್ದಾರೆ.

ಲೋಕಸಭೆಯಲ್ಲಿ ಮಾತನಾಡುವ ವೇಳೆ ಈ ವಿಷಯ ಪ್ರಸ್ತಾಪಿಸಿದ ಚೌಧರಿ, ಅಭಿನಂದನ್‌ಗೆ ಪ್ರಶಸ್ತಿ ನೀಡಬೇಕು ಮತ್ತು ಅವರ ಮೀಸೆಯನ್ನು ರಾಷ್ಟ್ರೀಯ ಮೀಸೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಫೆಬ್ರವರಿ 26ರಂದು ಪಾಕಿಸ್ತಾನದ ಬಾಲಕೋಟ್ ಮೇಲೆ ಭಾರತೀಯ ವಾಯುಪಡೆ ನಡೆಸಿದ ವಾಯುದಾಳಿಯ ಮರುದಿನ ಗಡಿ ನಿಯಂತ್ರಣ ರೇಖೆ ಸಮೀಪ ಆಗಮಿಸಿದ ಪಾಕಿಸ್ತಾನದ ಯುದ್ಧವಿಮಾನಗಳನ್ನು ಬೆನ್ನಟ್ಟುವ ವೇಳೆ ಅಭಿನಂದನ್ ಉಡಾಯಿಸುತ್ತಿದ್ದ ಮಿಗ್-21 ಬೈಸನ್ ಯುದ್ಧವಿಮಾನ ಪತನಗೊಂಡು ಪಾಕಿಸ್ತಾನದ ಗಡಿಭಾಗದಲ್ಲಿ ಬಿದ್ದಿತ್ತು. ಈ ವೇಳೆ ಅಭಿನಂದನ್ ಸುರಕ್ಷಿತವಾಗಿ ಕೆಳಗೆ ಜಿಗಿದಿದ್ದರೂ ಅವರನ್ನು ಪಾಕ್ ಸೈನಿಕರು ತಮ್ಮ ವಶಕ್ಕೆ ಪಡೆದುಕೊಂಡ್ದಿರು.

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಭಿನಂದನ್ ಅವರನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು ಮತ್ತು ಇದು ಶಾಂತಿಯ ಸಂಕೇತ ಎಂದು ವ್ಯಾಖ್ಯಾನಿಸಿದ್ದರು. ಮಾರ್ಚ್ ಒಂದರಂದು ರಾತ್ರಿ ಅಭಿನಂದನ್ ಅವರನ್ನು ಭಾರತೀಯ ಅಧಿಕಾರಿಗಳ ಸುಪರ್ದಿಗೆ ಒಪ್ಪಿಸಲಾಗಿತ್ತು. ಅಭಿನಂದನ್ ಭಾರತಕ್ಕೆ ಮರಳಿದ ನಂತರ ಅವರ ಮೀಸೆ ಮತ್ತು ಕೂದಲ ಶೈಲಿ ದೇಶಾದ್ಯಂತ ಜನಪ್ರಿಯಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News