"ಅಂದು ನನ್ನೊಂದಿಗೆ ಗ್ರಾಮ ವಾಸ್ತವ್ಯ ಮಾಡಿದ್ದ ಬಿಎಸ್‌ವೈಗೆ ಇಂದು ಕಹಿಯಾಗಿರುವುದು ಏಕೆ ?"

Update: 2019-06-24 14:39 GMT

ಬೆಂಗಳೂರು, ಜೂ. 24: ‘ಆಡಳಿತಾತ್ಮಕ ವಿಚಾರಗಳಿಗೆ ರಚನಾತ್ಮಕವಾಗಿ ಟೀಕೆ ಮಾಡಿದಲ್ಲಿ, ನಾನು ಅವುಗಳನ್ನು ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳುತ್ತೇನೆ. ಆದರೆ, ಸರಕಾರದ ವ್ಯಾಪ್ತಿಗೆ ಬಾರದ ನನ್ನ ವೈಯಕ್ತಿಕ ವಿಷಯಗಳ ಬಗ್ಗೆ ಪದೇ ಪದೇ ಮಾತನಾಡಿ, ವಿಪಕ್ಷ ನಾಯಕರ ಸ್ಥಾನದ ಘನತೆಗೆ ಕುಂದು ತರಬಾರದೆಂದು ಮುಖ್ಯಮಂತ್ರಿ ಕುಮಾರಸ್ವಾಮಿ, ಬಿಎಸ್‌ವೈಗೆ ಮನವಿ ಮಾಡಿದ್ದಾರೆ.

ಸೋಮವಾರ ಬಿಜೆಪಿ ಬಿಡುಗಡೆ ಮಾಡಿರುವ ‘ಗ್ರಾಮ ವಾಸ್ತವ್ಯ ಶೂನ್ಯ ಸಾಧನೆ’ ಕಿರು ಹೊತ್ತಿಗೆಗೆ ಸ್ಪಷ್ಟನೆ ನೀಡಿರುವ ಅವರು, ನಾನು ಹಿಂದೆ ಗ್ರಾಮ ವಾಸ್ತವ್ಯ ಮಾಡಿದ ಹಳ್ಳಿಗಳ ಸ್ಥಿತಿಗತಿಯ ಬಗ್ಗೆ ಮಾಹಿತಿ ತರಿಸಿಕೊಂಡಿದ್ದೇನೆ. ನಾನು ಅಧಿಕಾರದಲ್ಲಿದ್ದ 20 ತಿಂಗಳ ಅವಧಿಯಲ್ಲಿ 47 ಗ್ರಾಮಗಳಲ್ಲಿ ವಾಸ್ತವ್ಯ ಮಾಡಿದ್ದೇನೆ. ಈ ಗ್ರಾಮಗಳಲ್ಲಿ ಮಾಡಲಾಗಿರುವ ಅಭಿವೃದ್ಧಿ ಕಾರ್ಯಕ್ರಮಗಳ ಪಟ್ಟಿ ನನ್ನ ಬಳಿ ಇದೆ ಎಂದಿದ್ದಾರೆ.

‘ನನ್ನ ಗ್ರಾಮ ವಾಸ್ತವ್ಯದ ಪರಿಕಲ್ಪನೆ ಕೇವಲ ಆ ಗ್ರಾಮದ ಅಭಿವೃದ್ಧಿ ಮಾತ್ರವಲ್ಲ, ಸ್ಥಳೀಯವಾಗಿ ಜನರ ವೈಯಕ್ತಿಕ ಸಮಸ್ಯೆಗಳಿಗೂ, ಸ್ಥಳದಲ್ಲಿಯೇ ಪರಿಹಾರ ದೊರಕಿಸುವುದು. ಜನರ ಆಶಯಗಳನ್ನು ಅರ್ಥೈಸಿಕೊಂಡು ಯೋಜನೆ ರೂಪಿಸುವುದು ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಜನರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ದೊರಕಿಸಲು ಇರುವ ತೊಡಕುಗಳನ್ನು ನಿವಾರಿಸುವುದು ಗ್ರಾಮ ವಾಸ್ತವ್ಯದಿಂದ ಸಾಧ್ಯ. ರೈತರ ಸಾಲಮನ್ನಾ, ಸಾರಾಯಿ ನಿಷೇಧ, ಲಾಟರಿ ನಿಷೇಧ, ಸುವರ್ಣ ಗ್ರಾಮ ಯೋಜನೆ, ಸಾವಿರಕ್ಕೂ ಹೆಚ್ಚು ಶಾಲಾ ಕಾಲೇಜುಗಳ ಸ್ಥಾಪನೆ, 40 ಸಾವಿರಕ್ಕೂ ಹೆಚ್ಚು ಶಿಕ್ಷಕರ ನೇಮಕ ಮೊದಲಾದ ಉಪಕ್ರಮಗಳಿಗೆ ಪ್ರೇರಣೆ ನನ್ನ ಗ್ರಾಮ ವಾಸ್ತವ್ಯದ ಅನುಭವಗಳು. ನಾನು ತಂಗಿದ ಗ್ರಾಮಗಳಲ್ಲಿ ಕೆಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲು ಸಾಧ್ಯವಾಗಿದೆ. ಆದರೆ ನಂತರದ ದಿನಗಳಲ್ಲಿ ಸನ್ಮಾನ್ಯ ಯಡಿಯೂರಪ್ಪನವರು ಮುಖ್ಯಮಂತ್ರಿ ಆದಾಗ ಈ ಗ್ರಾಮಗಳಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆಂಬ ಮಾಹಿತಿ ನೀಡಲಿ.

ಗ್ರಾಮ ವಾಸ್ತವ್ಯ ವ್ಯರ್ಥ. ಅದಕ್ಕೆ ಕೋಟ್ಯಂತರ ರೂ.ವೆಚ್ಚ ಮಾಡಲಾಗಿದೆ ಎಂದು ಆರೋಪ ಮಾಡಲಾಗುತ್ತಿದೆ. ಗ್ರಾಮ ವಾಸ್ತವ್ಯದ ವೇಳೆ ಪ್ರಯಾಣ ವೆಚ್ಚ, ಶಾಲೆಯಲ್ಲಿ ಉಳಿದುಕೊಳ್ಳಲು ಕನಿಷ್ಠ ಸೌಲಭ್ಯ ಮಾತ್ರ ನನ್ನ ವೆಚ್ಚ. ಇದೇ ವೇಳೆಯಲ್ಲಿ ವಿವಿಧ ಇಲಾಖೆಗಳು ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ/ಉದ್ಘಾಟನೆ ಮಾಡಿದ್ದಲ್ಲಿ, ಅವುಗಳು ಗ್ರಾಮ ವಾಸ್ತವ್ಯದ ವೆಚ್ಚದ ವ್ಯಾಪ್ತಿಗೆ ಬರುವುದಿಲ್ಲ. ಚಂಡರಕಿ ಗ್ರಾಮದಲ್ಲಿ 58 ಕೋಟಿ ರೂ.ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ಆದರೆ ವಾಸ್ತವತೆಯನ್ನು ತಿಳಿದುಕೊಂಡು ಜವಾಬ್ದಾರಿಯುತ ಸ್ಥಾನದಲ್ಲಿರುವ ಯಡಿಯೂರಪ್ಪ ಮಾತನಾಡಬೇಕೆಂದು ನಾನು ಆಶಿಸುತ್ತೇನೆ.

ಗ್ರಾಮ ವಾಸ್ತವ್ಯ ಪ್ರಚಾರದ ಗಿಮಿಕ್ ಅಲ್ಲ. ಅಂತಃಕರಣ, ಮಾನವೀಯತೆ, ತಾಯಿ ಹೃದಯದಿಂದ ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ಇದ್ದಲ್ಲಿ ಮಾತ್ರ ಗ್ರಾಮ ವಾಸ್ತವ್ಯ ಸಾಧ್ಯ. ಜೆಡಿಎಸ್-ಬಿಜೆಪಿ ಸರಕಾರದ ಅವಧಿಯಲ್ಲಿ ಹಾಸನದ ಅರಕಲಗೂಡಿನ ಶ್ರೀರಾಮಪುರ ಗ್ರಾಮದಲ್ಲಿ ನಸುಕಿನ ಜಾವದವರೆಗೆ ನನ್ನೊಂದಿಗೆ ಗ್ರಾಮ ವಾಸ್ತವ್ಯ ಮಾಡಿದ್ದ ಬಿಎಸ್‌ವೈ ಅವರಿಗೆ ಅಂದು ಸಿಹಿಯಾಗಿದ್ದು, ಇಂದು ಕಹಿಯಾಗಿರುವುದು ಏಕೆ? ಎಂದು ಪ್ರಶ್ನಿಸಿದ್ದಾರೆ.

‘ಐಎಂಎ ಹಗರಣ ಕುರಿತು ಸರಕಾರ ಕಣ್ಣುಮುಚ್ಚಿ ಕುಳಿತಿಲ್ಲ. ಸಿಟ್ ರಚಿಸಿ, ತನಿಖೆ ನಡೆಸಲಾಗುತ್ತಿದೆ. ಯಡಿಯೂರಪ್ಪನವರ ಬಳಿ ಸರಕಾರದ ಸಚಿವರು, ಶಾಸಕರು ಮತ್ತಿತರರು ಈ ಹಗರಣದಲ್ಲಿ ಭಾಗಿಯಾಗಿರುವ ಕುರಿತು ಸೂಕ್ತ ದಾಖಲೆಗಳಿದ್ದರೆ, ಸಿಟ್‌ಗೆ ನೀಡಲಿ. ಪ್ರಕರಣವು ತನಿಖಾ ಹಂತದಲ್ಲಿ ಇರುವಾಗ ದಾಖಲೆಗಳಿಲ್ಲದೆ, ರಾಜಕೀಯ ನಾಯಕರ ಹೆಸರನ್ನು ಪ್ರಸ್ತಾಪಿಸಿ, ತನಿಖೆಯ ಹಾದಿ ತಪ್ಪಿಸುವುದು ಸೂಕ್ತವಲ್ಲ’

-ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News