ನೂತನ ಸಚಿವರಿಗೆ ಖಾತೆ ಹಂಚಿಕೆ: ಶಂಕರ್ ಗೆ ಪೌರಾಡಳಿತ, ನಾಗೇಶ್ ಗೆ ಸಣ್ಣ ಕೈಗಾರಿಕೆ

Update: 2019-06-24 15:01 GMT
 ಎಚ್.ನಾಗೇಶ್‌-ಆರ್.ಶಂಕರ್

ಬೆಂಗಳೂರು, ಜೂ.24: ರಾಜ್ಯ ಮೈತ್ರಿ ಸರಕಾರದ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಪಕ್ಷೇತರ ಶಾಸಕರಾದ ಆರ್.ಶಂಕರ್ ಹಾಗೂ ಎಚ್.ನಾಗೇಶ್‌ಗೆ ಖಾತೆಗಳನ್ನು ಹಂಚಿಕೆ ಮಾಡಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಲ್ಲಿಸಿರುವ ಶಿಫಾರಸ್ಸಿಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ. 

ಪೌರಾಡಳಿತ ಖಾತೆಯನ್ನು ಆರ್.ಶಂಕರ್ ಹಾಗೂ ಸಣ್ಣ ಕೈಗಾರಿಕೆ ಖಾತೆಯನ್ನು ಎಚ್.ನಾಗೇಶ್‌ಗೆ ಹಂಚಿಕೆ ಮಾಡಿ ಶಿಫಾರಸ್ಸು ಮಾಡಲಾಗಿದೆ. ಸಿ.ಎಸ್.ಶಿವಳ್ಳಿ ನಿಧನದಿಂದ ತೆರವಾಗಿದ್ದ ಪೌರಾಡಳಿತ ಖಾತೆಯನ್ನು ಶಂಕರ್‌ಗೆ ನೀಡಿದ್ದರೆ, ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವಾಸ್ ನಿರ್ವಹಿಸುತ್ತಿರುವ ಸಣ್ಣ ಕೈಗಾರಿಕೆ ಖಾತೆಯನ್ನು ನಾಗೇಶ್‌ಗೆ ಹಂಚಿಕೆ ಮಾಡಲಾಗಿದೆ.

ಇದೇ ವೇಳೆ ಮುಖ್ಯಮಂತ್ರಿ ಬಳಿಯಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯನ್ನು ಶ್ರೀನಿವಾಸ್‌ಗೆ ಹಂಚಿಕೆ ಮಾಡಲಾಗಿದೆ. ಜೂ.14ರಂದು ಇಬ್ಬರು ಶಾಸಕರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರೂ ಈವರೆಗೆ ಅವರಿಗೆ ಖಾತೆಗಳನ್ನು ಹಂಚಿಕೆ ಮಾಡಿರಲಿಲ್ಲ. ಈ ಸಂಬಂಧ ಸ್ವತಃ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹಲವಾರು ಬಾರಿ ಬಹಿರಂಗವಾಗಿ ಸರಕಾರವನ್ನು ಟೀಕಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News