ಐಎಂಎ ಬಹುಕೋಟಿ ವಂಚನೆ ಪ್ರಕರಣ: ಮನ್ಸೂರ್ ಖಾನ್ ನೆಲೆ ಪತ್ತೆ

Update: 2019-06-24 15:11 GMT

ಬೆಂಗಳೂರು, ಜೂ.24: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಮುಹಮ್ಮದ್ ಮನ್ಸೂರ್ ಖಾನ್ ಎಲ್ಲಿ ನೆಲೆಸಿದ್ದಾನೆ ಎಂಬ ಮಾಹಿತಿಯನ್ನು ಸಿಟ್ ತನಿಖಾಧಿಕಾರಿಗಳು ಕಲೆಹಾಕಿದ್ದಾರೆ.

ರವಿವಾರ ಮನ್ಸೂರ್, ತಾನು ಮಾಡಿದ ವಿಡಿಯೊ ಒಂದನ್ನು ಐಎಂಎ ಗ್ರೂಪ್ ಯೂಟ್ಯೂಬ್ ಚಾನೆಲ್‌ನಲ್ಲಿ ಹರಿಬಿಟ್ಟಿದ್ದ. ಈ ಸಂಬಂಧ ವಿಡಿಯೊ ಕುರಿತು ಮಾಹಿತಿ ಸಂಗ್ರಹಿಸಿರುವ ಸಿಟ್ ತನಿಖಾಧಿಕಾರಿಗಳು, ಪರಿಶೀಲನೆ ಕೈಗೊಂಡಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಟ್ ತಂಡದ ಮುಖ್ಯಸ್ಥ ಬಿ.ಆರ್.ರವಿಕಾಂತೇಗೌಡ, ಮನ್ಸೂರ್ ಖಾನ್ ಎಲ್ಲಿದ್ದಾನೆ ಎಂಬುದು ತಿಳಿದಿದೆ. ಆದರೆ, ತನಿಖಾ ಹಂತದಲ್ಲಿ ಈ ಮಾಹಿತಿ ಸಾರ್ವಜನಿಕಗೊಳಿಸಲು ಸಾಧ್ಯವಿಲ್ಲ ಎಂದರು.

ಮನ್ಸೂರ್ ವಿಡಿಯೊದಲ್ಲಿ ಹಲವು ವ್ಯಕ್ತಿಗಳ ವಿರುದ್ಧ ಆರೋಪ ಮಾಡಿದ್ದಾನೆ. ಆದರೆ, ಅವರನ್ನು ಗುರಿಯಾಗಿಸಿಕೊಂಡು ನೋಟಿಸ್ ನೀಡಲು ಸಾಧ್ಯವಿಲ್ಲ. ಆದರೆ, ಆರೋಪಗಳಿಗೆ ಸಾಕ್ಷ ಇದ್ದರೆ, ವಿಚಾರಣೆ ನಡೆಸಬಹುದು ಎಂದು ತಿಳಿಸಿದರು.

ಸಿಟ್ ತನಿಖಾ ತಂಡ, ಐಎಂಎ ಕಂಪೆನಿ ಒಡೆತನದ ಮಳಿಗೆಗಳ ಮೇಲೂ ದಾಳಿ ಮಾಡಿ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳನ್ನು ಜಪ್ತಿ ಮಾಡುವ ಕಾರ್ಯ ಮುಂದುವರೆಸಿದೆ. ಅಷ್ಟೇ ಅಲ್ಲದೆ, ವಂಚನೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾದ ಕಂಪೆನಿಯ ನಿರ್ದೇಶಕರು ಯಾರು ಎಂಬುದನ್ನು ಪತ್ತೆ ಮಾಡಿದ್ದು, ಅವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಾಹಿತಿ ನೀಡಿದರು.

ತನಿಖೆ ಪ್ರಗತಿ: ರಾಜ್ಯ ಅಪರಾಧ ವಿಭಾಗದ ಎಡಿಜಿಪಿ ಸಲೀಂ ಅಹ್ಮದ್ ಅವರನ್ನು ಸೋಮವಾರ ಭೇಟಿಯಾದ ಎಸ್‌ಐಟಿ ಅಧಿಕಾರಿಗಳು, ತನಿಖೆಯ ಪ್ರಗತಿ ಬಗ್ಗೆ ಮಾಹಿತಿ ನೀಡಿದರು.

ಬೆದರಿಕೆ ಇದ್ದರೆ ರಕ್ಷಣೆ

ಪ್ರಕರಣದ ಪ್ರಮುಖ ಆರೋಪಿ ಮುಹಮ್ಮದ್ ಮನ್ಸೂರ್ ಖಾನ್, ತನಗೆ ಹಾಗೂ ತನ್ನ ಕುಟುಂಬಕ್ಕೆ ಪ್ರಾಣ ಬೆದರಿಕೆ ಇದೆ. ರಕ್ಷಣೆ ಬೇಕು ಎಂದಿದ್ದಾನೆ. ಆತ ಕಾನೂನಿಗೆ ಗೌರವಿಸಿ, ತನಿಖೆಗೆ ಸಹಕಾರ ನೀಡಿದರೆ, ಸೂಕ್ತ ರಕ್ಷಣೆ ನೀಡಲಾಗುವುದು ಎಂದು ಸಿಟ್ ತಂಡದ ಮುಖ್ಯಸ್ಥ ಬಿ.ಆರ್. ರವಿಕಾಂತೇಗೌಡ ತಿಳಿಸಿದರು.

ಅಡವಿಟ್ಟ ಚಿನ್ನ ಪತ್ತೆ?

ಸಿಟ್ ತನಿಖಾಧಿಕಾರಿಗಳು, ಇಲ್ಲಿನ ಶಿವಾಜಿನಗರ, ಜಯನಗರ ಐಎಂಎ ಸಂಸ್ಥೆಯ ಮಳಿಗೆಗಳ ಮೇಲೆ ದಾಳಿ ನಡೆಸಿದಾಗ ಗ್ರಾಹಕರು ಅಡವಿಟ್ಟ ಚಿನ್ನಾಭರಣ ಪತ್ತೆಯಾಗಿದೆ ಎಂದು ವರದಿಯಾಗಿದೆ. ಬಡ್ಡಿ ರಹಿತ ಸಾಲ ನೀಡುವುದಾಗಿ ಭರವಸೆ ನೀಡಿದ್ದ ಹಿನ್ನಲೆ ನೂರಾರು ಗ್ರಾಹಕರು, ಚಿನ್ನಾಭರಣ ಅಡಮಾನ ಇಟ್ಟು, ಸಾಲ ಪಡೆದಿದ್ದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News