×
Ad

ಬಿಹಾರದಲ್ಲಿ ಮಕ್ಕಳ ಸಾವಿಗೆ ರಾಜ್ಯ ಸರಕಾರದ ನಿರ್ಲಕ್ಷವೇ ಕಾರಣ: ಎಸ್‌ಡಿಪಿಐ ಆರೋಪ

Update: 2019-06-24 22:09 IST

ಬೆಂಗಳೂರು, ಜೂ.24: ಉತ್ತರ ಬಿಹಾರದ ಮುಝಫ್ಫರ್ ಪುರ್ ಜಿಲ್ಲೆಯಲ್ಲಿ ತೀವ್ರ ಮೆದುಳು ಉರಿಯೂತ ಖಾಯಿಲೆಗೆ 100ಕ್ಕೂ ಅಧಿಕ ಮಕ್ಕಳು ಮೃತಪಟ್ಟಿರುವುದಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ತೀವ್ರ ಬೇಸರ ವ್ಯಕ್ತಪಡಿಸಿದೆ. ಮಕ್ಕಳ ಸಾವಿಗೆ ಸಂತಾಪ ಸೂಚಿಸಿರುವ ಪಕ್ಷವು, ದುರಂತ ಉಲ್ಭಣಗೊಳ್ಳುವುದಕ್ಕೆ ರಾಜ್ಯ ಸರಕಾರದ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿದೆ.

ಈ ಸಂಬಂಧ ಎಸ್‌ಡಿಪಿಐ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಾಫಿ ಹೇಳಿಕೆ ಬಿಡುಗಡೆ ಮಾಡಿದ್ದು, ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೆ ನೂರಾರು ಮಕ್ಕಳ ಸಾವನ್ನು ತಪ್ಪಿಸಬಹುದಿತ್ತು ಎಂದು ಹೇಳಿದ್ದಾರೆ.

ಅಪೌಷ್ಟಿಕತೆ ನಮ್ಮ ದೇಶದ ದೊಡ್ಡ ಸಮಸ್ಯೆಯಾಗಿದೆ. ಅಪೌಷ್ಟಿಕತೆಯಿಂದಾಗಿ ನಮ್ಮಲ್ಲಿ ಪ್ರತಿ ದಿನ ಒಂದು ಮಗು ಅಥವಾ ಓರ್ವ ವಯಸ್ಕ ಸಾವನ್ನಪ್ಪುತ್ತಿದ್ದಾರೆ. ಆಸ್ಪತ್ರೆಯ ಪರಿಸ್ಥಿತಿ ಕೂಡ ಉತ್ತಮವಾಗಿಲ್ಲದ ಕಾರಣ ಇಂತಹ ಜನರಿಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ. ಇಂತಹ ಘಟನೆಗಳು ಸಂಭವಿಸುವ ಮುನ್ನವೇ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಆಹಾರ ಮತ್ತು ಪೌಷ್ಟಿಕತೆಯ ಹಕ್ಕು ಪ್ರತಿಯೊಬ್ಬ ವಯಸ್ಕ ಮತ್ತು ಮಗುವಿನ ಹಕ್ಕಾಗಿದೆ. ಯಾವುದಾದರು ವ್ಯಕ್ತಿ ಅಥವಾ ಮಗು ಅಪೌಷ್ಟಿಕತೆಯಿಂದ ಸಾವನ್ನಪ್ಪುವುದಾದರೆ ಅದಕ್ಕೆ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿಲ್ಲ ಎಂದೇ ಅರ್ಥೈಸಿಕೊಳ್ಳಬೇಕಾಗುತ್ತದೆ ಎಂದು ಮುಹಮ್ಮದ್ ಶಾಫಿ ತಿಳಿಸಿದ್ದಾರೆ.

ಹೈಪೋ-ಗ್ಲೈಕೇಮಿಯಾ ಮುಂತಾದ ಮೂಲಭೂತ ವಿಷಯವನ್ನು ಎದುರಿಸಲು ನಮ್ಮ ವೈದ್ಯರಿಗೆ ಅರಿವಿಲ್ಲವೇ? ಈ ಋತುವಿನಲ್ಲಿ, ಗ್ಲೋಕೋಸ್ ಪ್ಯಾಕೆಟ್‌ಗಳನ್ನು ಉಚಿತವಾಗಿ ವಿತರಿಸುವ ಮೂಲಕ ಯಾವುದೇ ಹಾನಿಯನ್ನು ತಪ್ಪಿಸಬಹುದಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಉಪ ಕೇಂದ್ರಗಳ ಸ್ಥಿತಿ ತೀರಾ ಕಳಪೆಯಾಗಿದೆ. ಈ ಕ್ರಿಮಿನಲ್ ಕೃತ್ಯದಿಂದಾಗಿ ಈ ಸಾವುಗಳು ಸಂಭವಿಸಿವೆ. ಬಿಹಾರದ ಆರೋಗ್ಯ ಸಚಿವರು ಈ ದುರಂತದ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News