×
Ad

ಸ್ಮಾರ್ಟ್‌ಫೋನ್‌ ಗಳಿಂದ ಕಿರಿಕಿರಿ: ರೈಲ್ವೆ ಇಲಾಖೆ, ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2019-06-24 22:10 IST

ಬೆಂಗಳೂರು, ಜೂ.24: ಸಾರ್ವಜನಿಕ ಸಾರಿಗೆಯಲ್ಲಿ ಮೊಬೈಲ್ ಸ್ಮಾರ್ಟ್ ಫೋನ್‌ನಿಂದ ಉಂಟಾಗುವ ಕಿರಿಕಿರಿ ಕುರಿತು ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರ, ಹುಬ್ಬಳ್ಳಿ ರೈಲ್ವೆ ಬೋರ್ಡ್ ಅಧ್ಯಕ್ಷರಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಈ ಕುರಿತು ತುಮಕೂರು ಮೂಲದ ವಕೀಲ ಎಲ್.ರಮೇಶ್ ನಾಯಕ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. 

ವಕೀಲ ಎಲ್.ರಮೇಶ್ ನಾಯಕ್ ಅವರು ವಾದಿಸಿ, ರೈಲ್ವೆ, ಕೆಎಸ್ಸಾರ್ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳಲ್ಲಿ ಯಾವುದೇ ಹೆಡ್‌ಫೋನ್‌ಗಳನ್ನು ಹಾಕಿಕೊಳ್ಳದೇ ಸ್ಮಾರ್ಟ್‌ಫೋನ್‌ಗಳಲ್ಲಿ ಎಲ್ಲರಿಗೂ ಕಿರಿಕಿರಿ ಉಂಟಾಗುವಂತೆ ಆಡಿಯೋ ಮತ್ತು ವಿಡಿಯೋಗಳನ್ನು ಕೇಳುತ್ತಾರೆ. ಇದರಿಂದ, ಸಹ ಪ್ರಯಾಣಿಕರಿಗೂ ತೊಂದರೆಯಾಗುತ್ತಿದೆ. ಹೀಗಾಗಿ, ಶಬ್ದ ಮಾಲಿನ್ಯ ತಡೆಗೆ ನಿಯಮಗಳನ್ನು ರೂಪಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ರೈಲ್ವೆ ಹಾಗೂ ಸಾರ್ವಜನಿಕ ಬಸ್‌ಗಳಲ್ಲಿ ಧೂಪಮಾನ ನಿಷೇಧ, ಮದ್ಯ ನಿಷೇಧ ಎಂಬ ಫಲಕಗಳಿವೆ. ವಿಕಲಚೇತನರಿಗೆ, ಹಿರಿಯ ನಾಗರಿಕರಿಗೆ ಮೀಸಲಾಗಿರುವ ಆಸನಗಳು ಎಂಬ ಫಲಕಗಳನ್ನು ಅಳವಡಿಸಲಾಗಿದೆ. ಅದೇ ರೀತಿಯಾಗಿ ಮೊಬೈಲ್ ಸ್ಮಾರ್ಟ್‌ಫೋನ್‌ಗಳಿಂದ ಉಂಟಾಗುತ್ತಿರುವ ಕಿರಿಕಿರಿಯನ್ನು ತಡೆಗಟ್ಟಲು ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ರೈಲ್ವೆ ಇಲಾಖೆ, ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News