ಸರಕಾರವನ್ನು ಟೀಕಿಸುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಕೆಲಸವಿಲ್ಲ: ಡಿಸಿಎಂ ಪರಮೇಶ್ವರ್

Update: 2019-06-24 17:09 GMT

ಮೈಸೂರು,ಜೂ.24: ಬಿಜೆಪಿಯವರಿಗೆ ಸಮ್ಮಿಶ್ರ ಸರಕಾರವನ್ನು ಟೀಕೆ ಮಾಡುವುದು ಬಿಟ್ಟರೆ ಬೇರೆ ಏನೂ ಕೆಲಸವಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬಿಜೆಪಿ ವಿರುದ್ಧ ಹರಿಹಾಯ್ದರು.

ಸೈನ್ಸ್ ಸಿಟಿ ಯೋಜನೆ ಸ್ಥಳ ಪರಿಶೀಲನೆಗೆಂದು ಸೋಮವಾರ ಸುತ್ತೂರಿಗೆ ಭೇಟಿ ನೀಡಿದ್ದ ಅವರು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಮುಖ್ಯಮಂತ್ರಿ ಗ್ರಾಮ ವಾಸ್ತವ್ಯದ ಬಗ್ಗೆ ಬಿಜೆಪಿಯವರು ಟೀಕೆ ಮಾಡುತ್ತಾರೆ. ಇದನ್ನು ಏಕೆ ಮಾಡುತ್ತಿದ್ದಾರೆ ಎಂಬುದನ್ನೇ ಅರ್ಥಮಾಡಿಕೊಳ್ಳುತ್ತಿಲ್ಲ, ಗ್ರಾಮ ವಾಸ್ತವ್ಯದಿಂದ ಗ್ರಾಮಗಳ ಅಭಿವೃದ್ದಿಯಾಗುತ್ತದೆ. ಮತ್ತು ಅಲ್ಲಿನ ಸಮಸ್ಯೆಗಳು ಪರಿಹಾರವಾಗುತ್ತದೆ. ಜನರ ಆಶಯಕ್ಕಾಗಿ ಗ್ರಾಮವಾಸ್ತವ್ಯ ಮಾಡಲಾಗುತ್ತಿದೆ. ಗ್ರಾಮ ವಾಸ್ತವ್ಯ ಆಗಬಹುದು, ಪಾದಯಾತ್ರೆಯಾಗಬಹುದು. ಯಾವುದನ್ನೂ ಬಿಜೆಪಿಯವರು ಸಹಿಸಿಕೊಳ್ಳುವುದಿಲ್ಲ ಎಂದು  ಕಿಡಿಕಾರಿದರು.

ನನಗೇನೂ ಮಧ್ಯಂತರ ಚುನಾವಣೆ ನಡೆಯುತ್ತದೆ ಎಂದು ಅನಿಸುತ್ತಿಲ್ಲ. ನಾವು ಸಮ್ಮಿಶ್ರ ಸರಕಾರ ಮಾಡಿದ್ದೇವೆ. ನಮ್ಮ ಉದೇಶ ಐದು ವರ್ಷ ಉತ್ತಮ ಆಡಳಿತ ನಡೆಸುವ ಮೂಲಕ ಕರ್ನಾಟಕವನ್ನು ಅಭಿವೃದ್ದಿಪಡಿಸುವುದು. ಸಣ್ಣ ಪುಟ್ಟ ವ್ಯತ್ಯಾಸಗಳು ಹಾಗೂ ಹೇಳಿಕೆಗಳು ಅವರವರ ವೈಯಕ್ತಿಕ. ಒಂದು ರಾಷ್ಟ್ರೀಯ ಪಕ್ಷ ಪ್ರಾದೇಶಿಕ ಪಕ್ಷದ ಜೊತೆ ಅಧಿಕಾರ ನಡೆಸಿದರೆ ಇಂತಹ ಗೊಂದಲ ಸಹಜ ಎಂದು ಹೇಳಿದರು.

ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯದ ಕ್ರೆಡಿಟ್ ಜೆಡಿಎಸ್ ಪಕ್ಷಕ್ಕೆ ಹೋಗುತ್ತದೆ ಎಂದು ಹೇಳುವುದು ಸರಿಯಲ್ಲ. ಅವರು ಜೆಡಿಎಸ್ ಮುಖ್ಯಮಂತ್ರಿಯಲ್ಲ, ರಾಜ್ಯದ ಆರೂವರೆ ಕೋಟಿ ಜನರ ಮುಖ್ಯಮಂತ್ರಿ. ಗ್ರಾಮ ವಾಸ್ತವ್ಯ ಮಾಡಿದರೆ ಅದರ ಕ್ರೆಡಿಟ್ ಸಮ್ಮಿಶ್ರ ಸರಕಾರಕ್ಕೆ ಸಲ್ಲುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News