ಇವಿಎಂ ನಿಷೇಧಿಸಲು ಒತ್ತಾಯಿಸಿ ಮಹಿಳಾ ಕಾಂಗ್ರೆಸ್ ನಿಂದ ಪತ್ರ ಚಳುವಳಿ

Update: 2019-06-24 17:20 GMT

ಮೈಸೂರು,ಜೂ.24: ಸಾರ್ವಜನಿಕ ವಲಯದಲ್ಲಿ ಇವಿಎಂ ಮತಯಂತ್ರದ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಆದ್ದರಿಂದ ಅದನ್ನು ನಿಷೇಧಿಸಿ ಹಿಂದಿನಂತೆ ಬ್ಯಾಲೆಟ್ ಪೇಪರ್ ಮೂಲಕ ನಡೆಯುವ ಮತದಾನ ಜಾರಿಗೊಳಿಸಬೇಕೆಂದು ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಡಾ.ಪುಪ್ಪಾ ಅಮರನಾಥ್ ಒತ್ತಾಯಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪಾರದರ್ಶಕ ಚುನಾವಣೆಗಳು ನಡೆಸಬೇಕು. ಅದರೆ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಮತಕ್ಕೂ ಹಾಗೂ ಯಂತ್ರದಲ್ಲಿ ತೋರಿಸುವ ಮತಕ್ಕೆ ತಾಳೆಯಾಗುತ್ತಿಲ್ಲ. ಅಲ್ಲದೇ ಪಕ್ಷ ಸುಮಾರು 170 ಸ್ಥಾನ ಗೆಲ್ಲುವ ನಿರೀಕ್ಷೆಯಿತ್ತು. ಇಂತಹ ಸೋಲನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇಂತಹ ಅನಿರೀಕ್ಷಿತ ಫಲಿತಾಂಶ ಬಂದಿರುವುದರಿಂದ, ಇವಿಎಂ ಮತಯಂತ್ರವನ್ನು ಹ್ಯಾಕ್ ಮಾಡಿರುವ ಸಾಧ್ಯತೆಯನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದರು.

ಈ ನಿಟ್ಟಿನಲ್ಲಿ ಕಾಂಗ್ರೆಸ್ ಮಹಿಳಾ ಘಟಕದಿಂದ ರಾಜ್ಯಾದ್ಯಂತ ಪತ್ರ ಚಳುವಳಿ ನಡೆಸುವ ಮುಖಾಂತರ ರಾಷ್ಟ್ರಪತಿಗಳಿಗೆ ಬ್ಯಾಲೆಟ್ ಪೇಪರ್ ಮತದಾನಕ್ಕೆ ಒತ್ತಾಯಿಸಲಾಗುವುದು. ಆದ್ದರಿಂದ ಇಂದು ಮೈಸೂರಿನಲ್ಲಿ ಪತ್ರ ಚಳುವಳಿಯನ್ನು ಆರಂಭಿಸಲಾಗುತ್ತಿದ್ದು, ಇದರಂತೆ ಪ್ರತಿ ಜಿಲ್ಲಾ ಕೇಂದ್ರದಲ್ಲಿಯೂ ಆಯಾಯ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಈ ಚಳುವಳಿ ನಡೆಯಲಿದೆ. ಒಂದು ಲಕ್ಷಕ್ಕೂ ಹೆಚ್ಚು ಪತ್ರಗಳನ್ನು ಬರೆಯಲಾಗುವುದು ಹಾಗೂ ಈ ನಿಟ್ಟಿನಲ್ಲಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮಹಿಳಾ ಕಾರ್ಯದರ್ಶಿ ಲತಾ ಮೋಹನ್, ಉಪಾಧ್ಯಕ್ಷೆ ಪುಷ್ಪವಲ್ಲಿ, ಜಿಲ್ಲಾ ಘಟಕದ ಅಧ್ಯಕ್ಷೆ ಚಂದ್ರಕಲಾ, ಉಪಾಧ್ಯಕ್ಷೆ ಡಾ.ಸುಜಾತ, ಮಾಜಿ ಮೇಯರ್ ಮೋದಾಮಣಿ, ವೀಣಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News