ಸುಮಲತಾ ನೀರಿನ ಸಮಸ್ಯೆ ಬಗೆಹರಿಸುತ್ತಾರೆ: ನಿಖಿಲ್ ವ್ಯಂಗ್ಯ

Update: 2019-06-24 17:31 GMT

ಮಂಡ್ಯ, ಜೂ.24: ಸೋತರೂ ಜಿಲ್ಲೆಯ ಜನರ ಹಿತದ ಪ್ರಶ್ನೆ ಬಂದಾಗ ಸಹಾಯ ಹಸ್ತ ಚಾಚುವುದಾಗಿ ಹೇಳಿದ್ದ ಲೋಕಸಭೆ ಪರಾಜಿತ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಈಗ ವರಸೆ ಬದಲಿಸಿದ್ದಾರೆ. ನಾಲೆಗೆ ನೀರು ಬಿಡುವ ವಿಚಾರದಲ್ಲಿ ತಮ್ಮ ಪಾತ್ರವೇನು ಎಂಬುದಾಗಿ ಸೋಮವಾರ ಮಳವಳ್ಳಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಸಂಸದೆ ಸುಮಲತಾ ಅಂಬರೀಷ್ ಹೋರಾಟ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಸುಮಲತಾ ಅವರು ಬಿಜೆಪಿ ಬೆಂಬಲಿತ ಅಭ್ಯರ್ಥಿ. ಅವರಿಗೆ ಪ್ರಧಾನಮಂತ್ರಿವರೆಗೂ ಒಳ್ಳೆಯ ಕಾಂಟಾಕ್ಟ್ ಇದೆ. ನಾವೆಲ್ಲಾ ಯಾರು ಸ್ವಾಮಿ, ಸಣ್ಣವರು ನಾವೆಲ್ಲ. ಜನ ಆರಿಸಿರೋ ಸಂಸದರಿಗೂ ಜವಾಬ್ದಾರಿ ಇದೆ. ಅವರ ಜವಾಬ್ದಾರಿಯನ್ನು ಅರಿತು ಜನರ ನಿರೀಕ್ಷೆ ಕಾಪಾಡಲಿ ಎಂದರು.

ಸೋಲಿನಿಂದ ಧೃತಿಗೆಟ್ಟು ಕುಡಿದು ಗಲಾಟೆ ಮಾಡಿದನೆಂದು ಕೆಲವು ಮಾಧ್ಯದಲ್ಲಿ ಸುಳ್ಳು ಸುದ್ದಿ ಹರಡಿದ್ದರಿಂದ ಮನಸ್ಸಿಗೆ ನೋವಾಗಿದೆ. ನಾನು ಧೃತಿಗೆಟ್ಟಿಲ್ಲ. ಜೆಡಿಎಸ್ ಕಾರ್ಯಕರ್ತರ ಜತೆ ಸಾಯೋವರೆಗೂ ಇರುತ್ತೇನೆ. ವರಿಷ್ಠರ ಜತೆ ಮಾತನಾಡಿ ಪಕ್ಷ ಸಂಘಟನೆಗೆ ಪ್ರವಾಸ ಮಾಡುತ್ತೇನೆ ಎಂದು ನಿಖಿಲ್ ಸ್ಪಷ್ಟಪಡಿಸಿದರು.

ಪ್ರತಿನಿತ್ಯ ಕುಮಾರಸ್ವಾಮಿ, ದೇವೆಗೌಡರ ಜೊತೆ ಚರ್ಚೆ ಮಾಡಿ ರಾಜಕೀಯ ಅನುಭವ ಪಡೆಯುತ್ತಿದ್ದೇನೆ. ಮನೆ ಬಳಿ ಸಿಎಂ ನೋಡಲು ರಾಜ್ಯದ ಹಲವೆಡೆಯಿಂದ ಜನರು ಬರುತ್ತಾರೆ. ಕೆಲಸ ಒತ್ತಡದಿಂದ ಎಲ್ಲರನ್ನೂ ಸಿಎಂ ಭೇಟಿ ಮಾಡಲು ಸಾಧ್ಯವಿಲ್ಲ. ಆ ವೇಳೆ ಜನರ ಸಮಸ್ಯೆಗೆ ಮನೆ ಬಳಿ ಸ್ಪಂದಿಸುತ್ತಿದ್ದೇನೆ ಎಂದು ಅವರು ತಿಳಿಸಿದರು.

ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಥವಾ ಯುವಘಟಕಕ್ಕೆ ಅಧ್ಯಕ್ಷ ಸ್ಥಾನ ಪಡೆಯಲು ನನಗಿನ್ನೂ ಅನುಭವದ ಅವಶ್ಯಕತೆ ಇದೆ. ನಾನು ಕಾರ್ಯಕರ್ತನಾಗಿಯೇ  ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ನಿಖಿಲ್ ಪ್ರತಿಕ್ರಿಯಿಸಿದರು.

ಇದಕ್ಕೂ ಮುನ್ನ ಅನಾರೋಗ್ಯದಿಂದ ಮೃತಪಟ್ಟ ಮಳವಳ್ಳಿಯ ಜೆಡಿಎಸ್ ಕಾರ್ಯಕರ್ತ ಸಂತೋಷ್ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ನಿಖಿಲ್ ಸಾಂತ್ವನ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News