ಶರಾವತಿ ನದಿಯಿಂದ ಬೆಂಗಳೂರಿಗೆ ನೀರು ಪೂರೈಕೆಗೆ ವಿರೋಧ: ಜು.10 ರಂದು ಶಿವಮೊಗ್ಗ ಬಂದ್‍ಗೆ ಕರೆ

Update: 2019-06-24 17:47 GMT
ಸಾಹಿತಿ ನಾ.ಡಿಸೋಜ

ಶಿವಮೊಗ್ಗ, ಜೂ.24: ಶರಾವತಿ ನದಿಯಿಂದ ಬೆಂಗಳೂರಿಗೆ ನೀರು ಪೂರೈಸುವ ರಾಜ್ಯ ಸರ್ಕಾರದ ಚಿಂತನೆಗೆ ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. 'ಇದೊಂದು ಅವೈಜ್ಞಾನಿಕ ಚಿಂತನೆಯಾಗಿದೆ. ಇದಕ್ಕೆ ಸಂಬಂಧಿಸಿದ ಪ್ರಸ್ತಾವನೆ ರದ್ದುಗೊಳಿಸಬೇಕು' ಎಂದು ಸರ್ಕಾರಕ್ಕೆ ಆಗ್ರಹಿಸಿದೆ. 

ಸೋಮವಾರ ನಗರದಲ್ಲಿ ಒಕ್ಕೂಟದ ಗೌರವಾಧ್ಯಕ್ಷ ನಾ.ಡಿಸೋಜರವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. 'ಕೇವಲ 130 ಕಿ.ಮೀ. ಹರಿಯುತ್ತಿರುವ ಶರಾವತಿ ನದಿಗೆ ಈಗಾಗಲೇ 5 ಕಡೆ ಆಣೆಕಟ್ಟು ನಿರ್ಮಿಸಲಾಗಿದೆ. ನದಿಯಲ್ಲಿ ಮೀನುಗಳು ಮೊಟ್ಟೆಯಿಡಲು ಜಾಗವಿಲ್ಲದಂತಹ ಸ್ಥಿತಿಯಿದೆ. ಇಂತಹ ಸಂದರ್ಭದಲ್ಲಿ ಬೆಂಗಳೂರಿಗೆ ನೀರು ಹರಿಸುವ ನಿರ್ಧಾರ ಅತ್ಯಂತ ಅವಿವೇಕತನದ್ದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲೋಕೋಪಯೋಗಿ ಇಲಾಖೆಯಲ್ಲಿ ಕೆಲವೊಮ್ಮೆ ಇಂತಹ ಅಸಂಬದ್ದ ತೀರ್ಮಾನಗಳು ರಾಜಕಾರಣಿಗಳ ಒತ್ತಾಯಕ್ಕೆ ನಡೆಯುತ್ತವೆ. ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಹರಿಸುವ ಪ್ರಸ್ತಾವನೆಯೂ ಕೂಡ ರಾಜಕೀಯ ನಿರ್ಧಾರದಂತಿರುವ ಸಂಶಯಗಳು ವ್ಯಕ್ತವಾಗುತ್ತಿವೆ ಎಂದು ದೂರಿದರು. 

ಲಿಂಗನಮಕ್ಕಿ ಡ್ಯಾಂ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡವರು ಈಗಲೂ ಪರಿತಪಿಸುತ್ತಿದ್ದಾರೆ. ಹಲವು ದಶಕ ಕಳೆದರೂ ಸಂತ್ರಸ್ತರಿಗೆ ಅಗತ್ಯ ಸೌಲಭ್ಯ ಸಿಕ್ಕಿಲ್ಲ. ಅವರನ್ನು ಬದುಕಲು ಬಿಡದ ಸರ್ಕಾರ, ಇದೀಗ ಮತ್ತೆ ಮಲೆನಾಡನ್ನು ನಾಶಗೊಳಿಸಲು ಹೊರಟಿದೆ. ಇದು ಕೇವಲ ಶರಾವತಿ ಕಣಿವೆ ಜನರ ಸಮಸ್ಯೆಯಲ್ಲ. ಪರಿಸರ ಮತ್ತು ಭವಿಷ್ಯದ ಪ್ರಶ್ನೆಯಾಗಿದೆ. ಹಾಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದರು. 

ಸಾಹಿತಿ ಶ್ರೀಕಂಠ ಕೂಡಿಗೆ ಮಾತನಾಡಿ, ಈಗ ಉಳಿದಿರುವುದು ಒಂದೇ ದಾರಿ. ಅದು ಹೋರಾಟವಾಗಿದೆ. ಇದರಿಂದ ಮಾತ್ರ ಬದಲಾವಣೆ ಸಾಧ್ಯ ಎಂಬುವುದನ್ನು ಕುದುರೆಮುಖ, ತುಂಗಾ ಮೂಲ ಉಳಿವಿಗಾಗಿ ನಡೆದಿರುವ ಹೋರಾಟಗಳೇ ಸಾಕ್ಷಿಯಾಗಿವೆ. ಪಕ್ಷಾತೀತವಾಗಿ ಹೋರಾಟ ರೂಪುಗೊಳ್ಳುತ್ತಿರುವುದು ಸ್ವಾಗತಾರ್ಹ ವಿಚಾರವಾಗಿದೆ. ಇಡೀ ಜಿಲ್ಲೆ ಹಾಗೂ ನೆರೆಹೊರೆಯ ಜಿಲ್ಲೆಗಳ ಜನರು ಕೂಡ ಇದಕ್ಕೆ ಬೆಂಬಲ ವ್ಯಕ್ತಪಡಿಸಬೇಕಾಗಿದೆ ಎಂದರು. 

ಅಂಕಿಅಂಶಗಳ ತಜ್ಞ ಶಂಕರ ಶರ್ಮಾರವರು ಮಾತನಾಡಿ, ಸರ್ಕಾರವು ಒಟ್ಟಾರೆ 60 ಟಿಎಂಸಿ ನೀರನ್ನು ಹಂತಹಂತವಾಗಿ ಬೆಂಗಳೂರಿಗೆ ಕೊಂಡೊಯ್ಯುವ ಹುನ್ನಾರ ಇದರಲ್ಲಿದೆ. ಬೆಂಗಳೂರಿಗೆ ಅಗತ್ಯವಾದ ನೀರನ್ನು ಅಲ್ಲಿಂದಲೇ ಪಡೆದುಕೊಳ್ಳುವತ್ತ ಗಮನಹರಿಸಬೇಕಾಗಿದೆ. ಬೆಂಗಳೂರು ಬೆಳೆಯಲು ಮಲೆನಾಡನ್ನು ಬಲಿ ಕೊಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. 

400 ಕಿ.ಮೀ. ಉದ್ದದ 1300 ಅಡಿ ಎತ್ತರದ 3600 ಮೆಗಾ ವ್ಯಾಟ್ ವಿದ್ಯುತ್ ಖರ್ಚಿನ ಹಾಗೂ ಸಾವಿರಾರು ಕೋಟಿ ರೂ. ಬೇಕಾಗುವ ಈ ಯೋಜನೆ ವ್ಯರ್ಥವಾದುದು. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಯೋಜನೆಯನ್ನು ಕೈಬಿಡುವುದು ಒಳಿತು ಎಂದು ಅಭಿಪ್ರಾಯಪಟ್ಟರು. 

ಬಂದ್: ಶರಾವತಿ ನದಿಯಿಂದ ಬೆಂಗಳೂರಿಗೆ ನೀರು ಹರಿಸುವುದನ್ನು ವಿರೋಧಿಸಿ ಜು.10 ರಂದು ಸಂಪೂರ್ಣ ಶಿವಮೊಗ್ಗ ಜಿಲ್ಲೆ ಬಂದ್‍ಗೆ ಕರೆ ನೀಡಲಾಗಿದೆ. ಈ ಬಂದ್‍ಗೆ ಸರ್ವರು ಬೆಂಬಲಿಸಬೇಕು ಎಂದು ಒಕ್ಕೂಟ ಮನವಿ ಮಾಡಿದೆ. 

ಗೋಷ್ಠಿಯಲ್ಲಿ ಒಕ್ಕೂಟದ ಪ್ರಮುಖರಾದ ಗಣಪತಿ ಹೆಗ್ಗಡೆ, ಶಶಿ ಸಂಪಳ್ಳಿ, ಟೆಲೆಕ್ಸ್ ರವಿಕುಮಾರ್, ಉಮಾ ಮಹೇಶ್ವರ್, ಸತ್ಯನಾರಾಯಣ, ವಿನಯ್, ವಿನ್ಸೆಂಟ್ ರೋಡ್ರಿಗಸ್ ಸೇರಿದಂತೆ ಮೊದಲಾದವರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News