ಜಂಟಿ ಸರ್ವೆಯಲ್ಲಿ ಗುರುತಿಸಿದ ಜಾಗವನ್ನು ಕಂದಾಯ ಇಲಾಖೆಗೆ ಸೇರಿಸಿ: ಸಚಿವ ಕೆ.ಜೆ.ಜಾರ್ಜ್

Update: 2019-06-24 18:07 GMT

ಚಿಕ್ಕಮಗಳೂರು, ಜೂ.24: ಜಿಲ್ಲಾಡಳಿತ ಕೈಗೊಂಡಿರುವ ಕಂದಾಯ-ಅರಣ್ಯ ಭೂಮಿ ಜಂಟಿ ಸರ್ವೆ ಪ್ರಕ್ರಿಯೆ ಪೈಕಿ ಸರ್ವೆ ಕಾರ್ಯ ಮುಗಿದಿರುವ ಜಾಗಗಳಲ್ಲಿ ಸರಕಾರಿ ಜಾಗವನ್ನು ಕಂದಾಯ ಇಲಾಖೆಗೆ ಶೀಘ್ರ ಸೇರಿಸಿಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಜಂಟಿ ಸರ್ವೆ ಸಂಬಂಧ ಸಭೆಗೆ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಯ ಜಂಟಿ ಸರ್ವೆ ಕಾರ್ಯ ನಡೆಯುತ್ತಿದೆ. 1.07 ಲಕ್ಷ ಹೆಕ್ಟೇರ್ ಪ್ರದೇಶ ಸರ್ವೇ ಕಾರ್ಯ ನಡೆಯಬೇಕಿತ್ತು. ಈಗ 94.9 ಸಾವಿರ ಹೆಕ್ಟೇರ್ ಪ್ರದೇಶ ಸರ್ವೇ ಕಾರ್ಯ ನಡೆದಿದೆ. ಮಳೆಯಿಂದ ಸರ್ವೇ ಕಾರ್ಯಕ್ಕೆ ಅಡ್ಡಿ ಉಂಟಾಗಿತ್ತು. ಒಂದು ವಾರದೊಳಗೆ ಸರ್ವೇ ಕಾರ್ಯ ಪೂರ್ಣಗೊಳ್ಳಲಿದೆ ಎಂದ ಅವರು, ಪೂರ್ಣ ಪ್ರಮಾಣದ ಸರ್ವೇ ಕಾರ್ಯ ನಡೆದರೆ ಕಂದಾಯ ಇಲಾಖೆಗೆ 52 ಸಾವಿರ ಹೆಕ್ಟೇರ್ ಪ್ರದೇಶ ಸಿಗಲಿದೆ. 94, 94ಎ, 94ಸಿ, 94ಸಿಸಿಗಳಡಿ ಬಾಕಿ ಉಳಿದಿರುವ ಅರ್ಜಿಗಳನ್ನು ವಿಲೇವಾರಿ ಮಾಡಲು ಸಹಕಾರಿಯಾಗುತ್ತದೆ. ಶಾಲೆಗಳು, ಆಸ್ಪತ್ರೆ, ಅಂಗನವಾಡಿ ಕಟ್ಟಡ ಸೇರಿದಂತೆ ಸರಕಾರಿ ಕಚೇರಿಗಳಿಗೆ ಅಗತ್ಯವಿರುವ ಕಟ್ಟಡಗಳನ್ನು ಕಟ್ಟಲು ಜಾಗ ದೊರೆಯುತ್ತದೆ ಎಂದು ಸಭೆಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಜಾರ್ಜ್, ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ಕಾರ್ಯ ಪೂರ್ಣಗೊಂಡಿರುವ ಜಾಗವನ್ನು ಕಂದಾಯ ಇಲಾಖೆಗೆ ಸೇರಿಸಿಕೊಳ್ಳಲು ಸರ್ವೆ ಕಾರ್ಯ ಪೂರ್ಣಗೊಳ್ಳುವುದನ್ನು ಕಾಯುವ ಆವಶ್ಯಕತೆ ಇಲ್ಲ. ಈಗಾಗಲೆ ಸರ್ವೆ ಕಾರ್ಯ ಪೂರ್ಣಗೊಂಡು ಕಂದಾಯ ಭೂಮಿ ಎಂದು ಗುರುತಿಸಿರುವ ಸ್ಥಳವನ್ನು ಕಂದಾಯ ಇಲಾಖೆಗೆ ಸೇರಿಸಿಕೊಳ್ಳಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ ಅವರು, ಭೂ ಪ್ರದೇಶವನ್ನು ಕಂದಾಯ ಇಲಾಖೆಗೆ ಸೇರಿಸಿಕೊಳ್ಳಲು ಸರ್ವೇ ಕಾರ್ಯ ಪೂರ್ಣಗೊಳ್ಳುವವರೆಗೂ ಅಧಿಕಾರಿಗಳು ಕಾಯುವುದು ಬೇಡ. ಕಂದಾಯ ಭೂಮಿ ಎಂದು ಗುರುತಿಸಿರುವ ಭೂಮಿಯನ್ನು ಕಂದಾಯ ಇಲಾಖೆಗೆ ಸೇರಿಸಿಕೊಳ್ಳಲು ಶೀಘ್ರ ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ಭದ್ರಾ ಜಲಾಶಯ ಯೋಜನೆಗೆ ಭೂಮಿ ಕಳೆದುಕೊಂಡ ನಿರಾಶ್ರಿತರಿಗೆ ತರೀಕೆರೆ ತಾಲೂಕು ಕೆಂಚಿಕೊಪ್ಪ ಗ್ರಾಮದ ಸ.ನಂ.41 ಮತ್ತು 42ರಲ್ಲಿ ಭೂಮಿ ನೀಡಿದೆ. ಆದರೆ ಆಸ್ತಿಯನ್ನು ಈ ಸ್ವತ್ತಿಗೆ ಈವರೆಗೂ ಸೇರಿಸಿಲ್ಲವೆಂದು ತರೀಕೆರೆ ಶಾಸಕ ಡಿ.ಎಸ್.ಸುರೇಶ್ ಸಭೆಯಲ್ಲಿ ದೂರಿದರು. ಇದಕ್ಕೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ಕ್ರಮ ಕೈಗೊಳ್ಳುವಂತೆ ಸೂಚಿಸಿದರೂ ಏಕೆ ಕ್ರಮ ಕೈಗೊಂಡಿಲ್ಲ ಎಂದು ತರೀಕೆರೆ ತಹಶೀಲ್ದಾರ್ ಅವರನ್ನು ಪ್ರಶ್ನಿಸಿದರು. ಕೂಡಲೇ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ತಿಳಿಸಿದಾಗ, ಇದಕ್ಕೆ ಅಸಮಾದಾನ ವ್ಯಕ್ತಪಡಿಸಿದ ಶಾಸಕ ಸುರೇಶ್, ಹಿಂದಿನ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿತ್ತು. ಆಗಲೇ ಆದೇಶಿಸಿದ್ದರೂ ಏಕೆ ಕ್ರಮ ಕೈಗೊಂಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಕೆಡಿಪಿ ಸಭೆಯನ್ನು ಅಧಿಕಾರಿಗಳು ಹಗುರವಾಗಿ ಪರಿಗಣಿಸಬೇಡಿ. ಇಂದಿನ ಸಭೆಯಲ್ಲಿ ಪ್ರಸ್ತಾಪವಾದ ಸಮಸ್ಯೆಗಳಿಗೆ ಮುಂದಿನ ಸಭೆಯೊಳಗೆ ಅಧಿಕಾರಿಗಳು ಪರಿಹಾರ ಒದಗಿಸಲು ಅಗತ್ಯ ಕ್ರಮಕೈಗೊಳ್ಳಬೇಕು. ಭದ್ರಾ ಜಲಾಶಯ ಯೋಜೆಗೆ ಭೂಮಿ ಕಳೆದುಕೊಂಡ ನಿರಾಶ್ರಿತರಿಗೆ ಭೂಮಿ ಒದಗಿಸಲು ಇನ್ನೊಂದು ವಾರದೊಳಗೆ ಸೂಕ್ತ ಕ್ರಮಕೈಗೊಳ್ಳುವಂತೆ ತರೀಕೆರೆ ತಹಶೀಲ್ದಾರ್‍ಗೆ ಸೂಚಿಸಿದರು.

ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ತಾಲೂಕಿನ ರಸ್ತೆಗಳನ್ನು ಗುಣಮಟ್ಟದಲ್ಲಿ ಮಾಡಿಲ್ಲ ಎಂದು ಆರೋಪಿಸಿದರು. ಸಚಿವ ಜಾರ್ಜ್ ಮಾತನಾಡಿ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ರನ್ನು ಸ್ಥಳಕ್ಕೆ ಕಳುಹಿಸಿ ವರದಿ ಪಡೆದುಕೊಳ್ಳಿ. ರಸ್ತೆಯನ್ನು ಸರಿಪಡಿಸದಿದ್ದಲ್ಲಿ ಸಭೆಗೆ ತಪ್ಪು ಮಾಹಿತಿ ನೀಡಿರುವ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಾಕೃಷ್ಣಪ್ಪ, ಉಪಾಧ್ಯಕ್ಷ ಕೆ.ಆರ್.ಆನಂದಪ್ಪ, ಜಿ.ಪಂ. ಸಿ.ಇ.ಓ. ಎಸ್.ಅಶ್ವತಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News