ಮಧ್ಯಂತರ ಚುನಾವಣೆ ಹೇಳಿಕೆ ಮೈತ್ರಿ ಪಕ್ಷಗಳ ಬ್ಲಾಕ್‌ಮೇಲ್ ತಂತ್ರ: ಆರ್.ಅಶೋಕ್

Update: 2019-06-25 14:42 GMT

ಬೆಂಗಳೂರು, ಜೂ.25: ರಾಜ್ಯ ಸರಕಾರದ ಸ್ಥಿರತೆ ಬಗ್ಗೆ ಪದೇ ಪದೇ ಹೇಳಿಕೆ ಕೊಡುವುದು ವಿರೋಧ ಪಕ್ಷದವರ ಚಾಳಿಯಲ್ಲ. ಆಡಳಿತ ನಡೆಸುತ್ತಿರುವ ಮಿತ್ರ ಪಕ್ಷಗಳ ಮುಖಂಡರೇ ಅವರ ಸರಕಾರದ ಅಭದ್ರತೆ ಕುರಿತು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಹೇಳಿದರು.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗಬಹುದು ಎಂಬ ಹೇಳಿಕೆಯು ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರ ರಾಜಕೀಯ ದಾಳವಷ್ಟೇ. ಪರಸ್ಪರ ಬೆದರಿಸಲು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದರು.

ಜೆಡಿಎಸ್ ವರಿಷ್ಠ ದೇವೇಗೌಡರು ಮಧ್ಯಂತರ ಚುನಾವಣೆ ಬಗ್ಗೆ ಮಾತನಾಡಿದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ಜಪ ಮಾಡುತ್ತಿದ್ದಾರೆ. ಇವೆಲ್ಲ ಇವರ ಬ್ಲಾಕ್‌ಮೇಲ್ ತಂತ್ರ. ಮಧ್ಯಂತರ ಚುನಾವಣೆ ಬರುವುದಾದರೆ ಅದು ಆಡಳಿತ ಪಕ್ಷದವರಿಂದಲೇ ಬರಬೇಕು. ಆದರೆ, ಬಿಜೆಪಿಗೆ ಮಧ್ಯಂತರ ಚುನಾವಣೆಯ ಅಗತ್ಯವಿಲ್ಲ ಎಂದು ಅಶೋಕ್ ಹೇಳಿದರು.

ದೋಸ್ತಿ ಪಕ್ಷಗಳಿಗೆ ಸರಕಾರ ನಡೆಸಲು ಸಾಧ್ಯವಿಲ್ಲದಿದ್ದರೆ, ರಾಜ್ಯಪಾಲರು 105 ಶಾಸಕರನ್ನು ಹೊಂದಿರುವ ನಮ್ಮನ್ನು ಒಂದು ಬಾರಿ ಕೇಳಬೇಕಾಗುತ್ತದೆ. ರಾಜ್ಯಪಾಲರು ಆಹ್ವಾನ ನೀಡಿದರೆ ನಾವು ಸರಕಾರ ರಚಿಸಲು ಸಿದ್ಧರಿದ್ದೇವೆ ಎಂದು ಅವರು ತಿಳಿಸಿದರು.

ಇದೇ ವೇಳೆ ಜಿಂದಾಲ್ ಸಂಸ್ಥೆಗೆ ಸಾವಿರಾರು ಎಕರೆ ಭೂಮಿ ಪರಭಾರೆ ಮಾಡುವ ಸಂಬಂಧ ಪರಾಮರ್ಶಿಸಲು ಸಚಿವ ಸಂಪುಟ ಉಪ ಸಮಿತಿ ರಚಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸಮಿತಿಯು ಸರಕಾರದ ಪರವಾಗಿಯೇ ವರದಿ ನೀಡುತ್ತದೆ. ಸರಕಾರ ಬೇಕಿದ್ದರೆ ಜಿಂದಾಲ್‌ಗೆ ಭೂಮಿಯನ್ನು 10 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲಿ, ಮಾರಾಟ ಮಾಡಬಾರದು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News