×
Ad

ಸಮಾಜಮುಖಿಯಾಗಿ ಸ್ಪಂದಿಸುವ ಗುಣ ಸ್ಕೌಟ್ಸ್, ಗೈಡ್ಸ್ ಕಲಿಸುತ್ತದೆ: ರಾಜ್ಯಪಾಲ ವಾಲಾ

Update: 2019-06-25 21:22 IST

ಬೆಂಗಳೂರು, ಜೂ.25 : ಸಮಾಜಮುಖಿಯಾಗಿ ಬಡವರ, ದುರ್ಬಲರ ಕಷ್ಟ, ನೋವುಗಳಿಗೆ ಸ್ಪಂದಿಸುವ ಗುಣ ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿದೆ ಎಂದು ರಾಜ್ಯಪಾಲ ವಾಜುಭಾಯಿ ವಾಲಾ ಹೇಳಿದ್ದಾರೆ.

ರಾಜಭವನದ ಗಾಜಿನಮನೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕಬ್ಸ್, ಬುಲ್‌ಬುಲ್ಸ್, ಸ್ಕೌಟ್ಸ್, ಗೈಡ್ಸ್, ರೋವರ್ಸ್‌ ಮತ್ತು ರೇಂಜರ್ಸ್‌ಗಳಿಗೆ ಚತುರ್ಥ ಚರಣ್, ಹೀರಕ್ ಪಂಕ್ ಮತ್ತು ರಾಜ್ಯ ಪುರಸ್ಕಾರ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಿ ಮಾತನಾಡಿದರು.

ಇಂದು ಸಮಾಜದಲ್ಲಿ ಬಹಳಷ್ಟು ಜನ ತುತ್ತು ಅನ್ನಕ್ಕೂ ಕಷ್ಟಪಡುತ್ತಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸುವ ಮನೋಭಾವವನ್ನು ಯುವಜನತೆ ರೂಢಿಸಿಕೊಳ್ಳಬೇಕು. ವಿಶ್ವವೇ ಒಂದು ಕುಟುಂಬವಿದ್ದಂತೆ. ವಿದ್ಯಾರ್ಥಿಗಳು ತಮ್ಮ ಕೆಲಸವನ್ನೇ ಪೂಜ್ಯ ಮನೋಭಾವದಿಂದ ನೋಡಬೇಕು. ಪ್ರಪಂಚದ ದೈನಂದಿನ ಘಟನೆಗಳ ಬಗ್ಗೆ ಮಾಹಿತಿ ಇರಬೇಕು ಎಂದು ಸಲಹೆ ನೀಡಿದರು.

ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಮಾತನಾಡಿ, ರಾಜ್ಯದಲ್ಲಿ ಸುಮಾರು 6.5 ಲಕ್ಷ ದ್ಯಾರ್ಥಿಗಳು ಸ್ಕೌಟ್ಸ್ ಮತ್ತು ಗೈಡ್ಸ್‌ನ ಸದಸ್ಯತ್ವ ಹೊಂದಿದ್ದಾರೆ. ಇವರಲ್ಲಿ 4,613 ವಿದ್ಯಾರ್ಥಿಗಳಿಗೆ ಚತುರ್ಥ ಚರಣ್, ಹೀರಕ್ ಪಂಕ್ ಮತ್ತು ರಾಜ್ಯ ಪುರಸ್ಕಾರ ಪ್ರಮಾಣ ಪತ್ರಗಳು ಲಭಿಸಿದೆ. ರಾಜ್ಯದ ಎಲ್ಲ 35 ಜಿಲ್ಲಾ ಕೇಂದ್ರಗಳಿಂದ ಪ್ರಸ್ತುತ ಸಾಲಿನಲ್ಲಿ ವಿದ್ಯಾರ್ಥಿಗಳು ಒಳ್ಳೆಯ ಸಾಧನೆ ಮಾಡಿದ್ದಾರೆ ಎಂದರು.

1907ರಲ್ಲಿ ಆರಂಭವಾದ ಸ್ಕೌಟ್ಸ್ ಚಳುವಳಿಯನ್ನು ವಿಶ್ವಕ್ಕೆ ಲಾರ್ಡ್ ಬೇಡನ್ ಪೊವೆಲ್ ಪರಿಚಯಿಸಿದ್ದು, ಶತಮಾನೋತ್ಸವ ಆಚರಿಸಿರುವ ಈ ಚಳುವಳಿಯ ಚಟುವಟಿಕೆಗಳು ವಿಶ್ವದ 218 ರಾಷ್ಟ್ರಗಳಲ್ಲಿ ಹರಡಿವೆ. ವಿದ್ಯಾರ್ಥಿಗಳನ್ನು ದೈಹಿಕ, ಭೌತಿಕ, ಸಾಮಾಜಿಕವಾಗಿ ಅಭಿವೃದ್ಧಿಗೊಳಿಸುವುದರ ಜೊತೆಗೆ ಕೌಶಲ್ಯ ವೃದ್ಧಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ತಿಳಿಸಿದರು.

ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ಪ್ರಸ್ತುತ ಚುನಾವಣೆ ಸಂದರ್ಭದಲ್ಲಿ ಹಿರಿಯ ನಾಗರಿಕರು, ಅಂಗವಿಕಲರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಬೂತ್‌ಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ವಿದ್ಯಾರ್ಥಿಗಳ ಕೌಶಲ್ಯ ತರಬೇತಿಯನ್ನು ಆನ್‌ಲೈನ್ ಮೂಲಕ ಮಾಡಿದ ಮೊದಲ ದೇಶ ನಮ್ಮದು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ಭಾರತಿ ಚಂದ್ರಶೇಖರ್, ರಾಜ್ಯ ಸ್ಕೌಟ್ಸ್ ಆಯುಕ್ತರಾದ ಎಂ.ಎ. ಖಾಲಿದ್ ಸೇರಿದಂತೆ ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News