ಜಾರ್ಖಂಡ್ ನಲ್ಲಿ ಮುಸ್ಲಿಂ ಯುವಕನ ಹತ್ಯೆ ಪ್ರಕರಣ: ಎಸ್‌ಡಿಪಿಐ ಖಂಡನೆ

Update: 2019-06-25 15:59 GMT

ಬೆಂಗಳೂರು, ಜೂ.25: ಜಾರ್ಖಂಡ್ ರಾಜ್ಯದಲ್ಲಿ ಮೋಟಾರ್ ಬೈಕ್ ಕಳ್ಳ ಎಂಬ ಅನುಮಾನದ ಮೇಲೆ ಅಮಾಯಕ ಮುಸ್ಲಿಂ ಯುವಕನನ್ನು ಥಳಿಸಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ತೀವ್ರವಾಗಿ ಖಂಡಿಸಿದೆ.

ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ನಾಥುರಾಮ್ ಗೋಡ್ಸೆಯನ್ನು ದೇಶಭಕ್ತ ಮತ್ತು ಹುತಾತ್ಮ ಎಂದು ಪರಿಗಣಿಸಿದ ಬಿಜೆಪಿ ಆಡಳಿತವು, ಅಲ್ಪಸಂಖ್ಯಾತರು ಮತ್ತು ದಲಿತರನ್ನು ಭಯ ಮತ್ತು ಹತಾಶೆಯ ಸ್ಥಿತಿಯಲ್ಲಿಡಲು ತನ್ನ ಬೀದಿ ಗೂಂಡಾಗಳಿಗೆ ಕೊಲೆ ಮತ್ತು ಹಿಂಸಾತ್ಮಕ ಕೃತ್ಯಗಳೊಂದಿಗೆ ಮುಂದುವರಿಯುವಂತೆ ಸಂದೇಶ ಕಳುಸುತ್ತಿದೆ ಎಂದು ದೂರಿದರು.

ಇದು ಸಂಘಪರಿವಾರದ ‘ನವ ಭಾರತ’ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅಧಿಕಾರಕ್ಕೆ ಮರಳಿದ ನಂತರ ಪ್ರಧಾನಿ ನರೇಂದ್ರ ಮೋದಿ ತಮ್ಮ ಮೊದಲ ಭಾಷಣದಲ್ಲೇ ಅಲ್ಪಸಂಖ್ಯಾತರಿಗೆ, ವಿಶೇಷವಾಗಿ ಮುಸ್ಲಿಮರಿಗೆ ರಕ್ಷಣೆ ನೀಡುವ ಮಾತನ್ನಾಡಿ, ‘‘ಸಬ್ ಕಾ ವಿಶ್ವಾಸ್’’ ಗಳಿಸಲು ಕೆಲಸ ಮಾಡುವ ಭರವಸೆ ನೀಡಿದ್ದನ್ನು ಅವರು ಸ್ಮರಿಸಿದ್ದಾರೆ.

ಆದರೂ, ವಾಸ್ತವ ಮಾತ್ರ ಭಿನ್ನವಾಗಿದ್ದು, ಮುಸ್ಲಿಮರ ಮೇಲಿನ ಹಿಂಸಾಚಾರವು ಮತ್ತಷ್ಟು ಭೀಕರತೆಯೊಂದಿಗೆ ಪುನಃ ಆರಂಭವಾಗಿದೆ. ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಕೊಲೆಗಾರ ಜನಸಮೂಹದ ವಿರುದ್ಧ ಹೋರಾಡಲು ಸಾರ್ವಜನಿಕರು ಒಗ್ಗೂಡಬೇಕಾದ ಸಮಯ ಬಂದಿದೆ ಎಂದು ಅವರು ಕರೆ ನೀಡಿದ್ದಾರೆ. ಭಾರತದಲ್ಲಿ ಏಕತೆ ಮತ್ತು ಸಹೋದರತ್ವ ಮೇಲುಗೈ ಸಾಧಿಸಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇದು ದೇಶಕ್ಕೆ ವಿನಾಶಕಾರಿಯಾಗಿ ಪರಿಣಮಿಸಲಿದೆ ಎಂದು ಫೈಝಿ ಆತಂಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News