ಮುಸ್ಲಿಮರ ಹತ್ಯೆಯ ಕುರಿತು ಪ್ರಧಾನಿ ಮೌನ: ಪಿಎಫ್‌ಐ ಕಳವಳ

Update: 2019-06-25 16:20 GMT

ಬೆಂಗಳೂರು, ಜೂ.25: ಕೇಂದ್ರದಲ್ಲಿ ಮತ್ತೊವ್ಮೆು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಅಧಿಕಾರ ವಹಿಸಿಕೊಂಡು ಕೆಲವೇ ದಿನಗಳಲ್ಲಿ ದೇಶಾದ್ಯಂತ ಮುಸ್ಲಿಮ್ ವಿರೋಧಿ ದಾಳಿಗಳು ಹೆಚ್ಚುತ್ತಿವೆ. ಆದರೂ ಪ್ರಧಾನಿ ಈ ಬಗ್ಗೆ ಯಾವುದೆ ಪ್ರತಿಕ್ರಿಯೆ ನೀಡದೆ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಪಿಎಫ್‌ಐ ಅಧ್ಯಕ್ಷ ಇ.ಅಬೂಬಕರ್ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆಯೇ ಅಲ್ಪಸಂಖ್ಯಾತರನ್ನು ಭಯಮುಕ್ತಗೊಳಿಸುವುದು ಮತ್ತು ಅವರ ವಿಶ್ವಾಸ ಗಳಿಸುವುದಾಗಿ ನೀಡಲಾದ ಪ್ರಧಾನಿಯ ಭರವಸೆಯ ಹೊರತಾಗಿಯೂ, ದೇಶದಲ್ಲಿ ಹಿಂದುತ್ವ ಗೂಂಡಾಗಳು ನಡೆಸುವ ಗುಂಪು ಹತ್ಯೆಗಳು ಬಹಳಷ್ಟು ಆಘಾತಕಾರಿ ಮಟ್ಟದಲ್ಲಿ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಜಾರ್ಖಂಡ್ ಮೂಲದ 24ರ ಹರೆಯದ ತಬ್ರೇಝ್ ಅನ್ಸಾರಿ ಎನ್ನುವ ಯುವಕ ಕೋಮುವಾದಿ ಮತಾಂಧರಿಂದ ಕ್ರೂರವಾಗಿ ಥಳಿಸಲ್ಪಟ್ಟು, ತೀವ್ರ ಗಾಯಗಳಿಂದಾಗಿ ಸಾವನ್ನಪ್ಪಿದ್ದದು, ಇದರ ಬೆನ್ನೆಲ್ಲೆ ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದಾಳಿಯನ್ನು ದೃಢಪಡಿಸಿ ಪ್ರಕಟಿಸಿದ ಅಮೆರಿಕಾದ ವಿದೇಶಾಂಗ ವ್ಯವಹಾರ ಇಲಾಖೆಯ ವರದಿಯನ್ನು ಭಾರತೀಯ ವಿದೇಶಾಂಗ ಸಚಿವಾಲಯ ತಿರಸ್ಕರಿಸಿರುವುದು ವಿಪರ್ಯಾಸವೇ ಸರಿ ಎಂದು ಅವರು ಅಭಿಪ್ರಾಯಿಸಿದ್ದಾರೆ.

ಅಲ್ಪಸಂಖ್ಯಾತರ ಮೇಲೆ ಹಲ್ಲೆ ಮಾಡುತ್ತಿರುವ ದಾಳಿಕೋರರು ಸಂಘಪರಿವಾರದ ಹಿನ್ನೆಲೆಯವರಾಗಿದ್ದು, ಮುಸ್ಲಿಂ ವಿರೋಧಿ ಸಿದ್ಧಾಂತದಿಂದ ಪ್ರಭಾವಿತರಾಗಿದ್ದಾರೆ. ಅಧಿಕಾರದ ರಕ್ಷಣೆಯಲ್ಲಿರುವ ಹಿಂದುತ್ವ ಮತಾಂಧರು ಹೆಚ್ಚು ಸಂಘಟಿತರಾಗಿ ಶಸ್ತ್ರಸಜ್ಜಿತರಾಗಿ ನಿರ್ಭೀತಿಯಿಂದ ಮುಸ್ಲಿಮರ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಸಣ್ಣ ಪುಟ್ಟ ಘಟನೆಗಳಿಗೆ ಪ್ರತಿಕ್ರಿಯಿಸುವ ಸರಕಾರ, ಮುಸ್ಲಿಮರ ಮೇಲಿನ ಹಿಂದುತ್ವ ಶಕ್ತಿಗಳ ದಾಳಿ ಬಗ್ಗೆ ಮಾತ್ರ ಮೌನವಾಗಿರುತ್ತದೆ. ಅದೇ ಸಮಯ ರಾಜಸ್ಥಾನದ ಬಾರ್ಮರ್‌ನಲ್ಲಿ ಪೆಂಡಾಲ್ ಕುಸಿದ ಘಟಣೆಗೆ ತಕ್ಷಣ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಮುಸ್ಲಿಮರ ಮೇಲೆ ಪದೇ ಪದೇ ನಡೆಯುತ್ತಿರುವ ಗುಂಪು ಹತ್ಯೆಗಳ ಬಗ್ಗೆ ಜಾಣ ಮೌನಕ್ಕೆ ಜಾರಿದ್ದಾರೆ ಎಂದು ಅವರು ಪತ್ರಿಕಾ ಪ್ರಕಟನೆಯಲ್ಲಿ ಖಂಡಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News